ಮಂಡ್ಯ: ಪರಿಸರವನ್ನು ಉಳಿಸಲು ಕೇವಲ ಪರಿಸರ ದಿನಾಚರಣೆಯಂದು ಗಿಡ ನೆಟ್ಟರೆ ಸಾಲದು, ಸಾಧ್ಯವಾದಷ್ಟು ದಿನಗಳಲ್ಲಿ ಗಿಡ ಮರಗಳನ್ನು ನೆಟ್ಟಿ ಸಂರಕ್ಷಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಆಡಳಿತ) ಪಿ.ಲಕ್ಷ್ಮಿ ಅವರು ಹೇಳಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಹವಾಮಾನ ಕ್ರಮದ ಕುರಿತು ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹವಮಾನ ವೈಪರೀತ್ಯದಿಂದ ಪ್ರಕೃತಿ ಅವನತಿಯತ್ತ ಸಾಗುತ್ತಿದೆ ಪ್ರಕೃತಿಯನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದು, ಐಷಾರಾಮಿ ಜೀವನ ಸಾಗಿಸಲು ಅನೇಕ ರೀತಿಯಲ್ಲಿ ಪ್ರಕೃತಿಯನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದೇವೆ. ಫ್ರಿಡ್ಜ್, ಏರ್ ಕೂಲರ್ ನಂತಹ ಮುಂತಾದ ಉಪಕರಣಗಳು ಹೊರಸುಸುವ ವಿಷಕಾರಿ ಅನಿಲವು ಓಜೋನ್ ಪದರವನ್ನು ಹಾಳುಮಾಡುತ್ತಿದೆ ಆದ್ದರಿಂದ ಇಂತಹ ಉಪಕರಣಗಳನ್ನು ಸರಿಯಾದ ವಿಧಾನದ ಮೂಲಕ ಬಳಸಬೇಕು ಎಂದು ಹೇಳಿದರು.
ಪರಿಸರವನ್ನು ಉತ್ತಮವಾಗಿ ಬೆಳೆಸುವುದರ ಜೊತೆಗೆ ಉಳಿಸಿ ಸಂರಕ್ಷಿಸಬೇಕಾಗಿದೆ, ಪ್ಲಾಸ್ಟಿಕ್ ಮುಕ್ತವಾಗಿದ್ದರೂ ದಿನನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ ಪ್ಲಾಸ್ಟಿಕ್ ಗಳನ್ನು ಹೆಚ್ಚಾಗಿ ಬಳಸಬೇಡಿ ಬಳಸಿದರು ಸಹ ಅದನ್ನು ಸುಡಬೇಡಿ ಬದಲಾಗಿ ಅದನ್ನು ಮರುಬಳಕೆಗೆ ಒಳಪಡಿಸಿ ಬಳಕೆ ಮಾಡುವ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡಬೇಕು ಎಂದರು.
ಕಛೇರಿಗಳಲ್ಲಿ ಫ್ಯಾನ್, ಎ.ಸಿ ಗಳನ್ನು ವ್ಯರ್ಥವಾಗಿ ಬಳಸಬೇಡಿ. ಇದರಿಂದ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. ಪರಿಸರವನ್ನು ಉಳಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊAಡು ಅನುಸರಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಧನುಷ್ ಅವರು ಮಾತನಾಡಿ ಗಿಡ ಮರಗಳನ್ನು ನೆಡುವುದರ ಜೋತೆಗೆ ಅವುಗಳ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ, ಇತ್ತೀಚಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿಯದೇ ಗಿಡ ಮರಗಳಿರುವ ಸುಸಜ್ಜಿತ ಪ್ರದೇಶವನ್ನು ತನ್ನ ಸಹ ಹಾಳು ಮಾಡುತ್ತಿದ್ದಾರೆ ಪರಿಸರವನ್ನು ಹಾಳು ಮಾಡದಂತೆ ಕಾಪಾಡಲು ಜಾಗೃತಿ ಮೂಡಿಸಬೇಕಿದೆ ಎಂದರು.
ಸುತ್ತಲಿನ ಮುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆಗೆ ಹವಾಮಾನ ವೈಪರೀತ್ಯದ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಎಂ. ಬಾಬು, ಜಿಲ್ಲಾ ಪಂಚಾಯತ್ ಸಾಹಯಕ ಕಾರ್ಯದರ್ಶಿ ಚಂದ್ರು, ಇಸ್ರೋ ವಿಜ್ಞಾನಿ ಡಾ. ಜಗನ್ನಾಥ್, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಸಂಶೋದನಾ ವಿಜ್ಞಾನಿ ಡಾ. ಶ್ರುತಿ ಬಿ.ವಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಪ್ರದೀಪ್ ಕುಮಾರ್, ರುಚಿತಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.














