ಮನೆ ಅಪರಾಧ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ವೃದ್ಧ ದಂಪತಿಗೆ 5 ಕೋಟಿ ರೂ. ವಂಚನೆ : ಇಬ್ಬರು ಆರೋಪಿಗಳ...

‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ವೃದ್ಧ ದಂಪತಿಗೆ 5 ಕೋಟಿ ರೂ. ವಂಚನೆ : ಇಬ್ಬರು ಆರೋಪಿಗಳ ಬಂಧನ

0

ಬೆಂಗಳೂರು: ‘ಡಿಜಿಟಲ್ ಅರೆಸ್ಟ್‌’ ಎಂಬ ಹೆಸರಿನಲ್ಲಿ ವೃದ್ಧ ದಂಪತಿಗೆ ಭಯ ಹುಟ್ಟಿಸಿ ರೂ. 4.79 ಕೋಟಿ ವಂಚಿಸಿದ ಇಬ್ಬರು ಸೈಬರ್‌ ಕ್ರಿಮಿನಲ್‌ಗಳನ್ನು ಆಗ್ನೇಯ ವಿಭಾಗದ ಸೈಬರ್‌ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ನಾರಾಯಣ ಸಿಂಗ್‌ ಚೌಧರಿ ಮತ್ತು ಈಶ್ವರ್‌ ಸಿಂಗ್‌ ಎಂದು ಗುರುತಿಸಲಾಗಿದೆ.

ವೃತ್ತಿಯಿಂದ ಎಂಜಿನಿಯರ್ ಆಗಿದ್ದ ಮಂಜುನಾಥ್ ಎಂಬುವವರು 31 ವರ್ಷ ನೈಜೀರಿಯಾದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದವರು. ಅವರು ತಮ್ಮ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದು, ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಹಣ ಇಟ್ಟುಕೊಂಡಿದ್ದರು. ಮಾರ್ಚ್ ತಿಂಗಳಲ್ಲಿ ಈ ದಂಪತಿಗೆ ಬಂದ ಅಪರಿಚಿತ ಕರೆಗಳಿಂದ ಎಲ್ಲವೂ ಶುರುವಾಯಿತು.

ಆರೋಪಿತರು ತಮ್ಮನ್ನು ಬ್ಯಾಂಕ್‌ ಪ್ರತಿನಿಧಿಗಳು ಎಂದು ಪರಿಚಯಿಸಿ, ಖಾತೆಗಳಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ, ಇದನ್ನು ಇ.ಡಿ. ಹಾಗೂ ಸಿಬಿಐ ತನಿಖೆ ಮಾಡುತ್ತಿದೆ ಎಂಬ ನೆಪದಲ್ಲಿ ಬೆದರಿಸಿದ್ದರು. ಇದಕ್ಕೂ ಹೆಚ್ಚು, ಅವರು ನಕಲಿ ಬಂಧನ ವಾರಂಟ್‌ ಅನ್ನು ವಾಟ್ಸಾಪ್‌ ಮೂಲಕ ಕಳುಹಿಸಿ, ಮಂಜುನಾಥ್‌ ಅವರನ್ನು ತೀವ್ರವಾಗಿ ಆತಂಕಕ್ಕೆ ಗುರಿಮಾಡಿದ್ದರು.

ಭಯದಿಂದ ವೃದ್ಧ ದಂಪತಿ ಹಂತ ಹಂತವಾಗಿ ಸುಮಾರು 4.79 ಕೋಟಿ ರೂಪಾಯಿ ವಂಚಿತರಿಗೆ ನೀಡಿದ್ದಾರೆ. ಆರೋಪಿತರು ಇಷ್ಟು ಮಾತ್ರದಲ್ಲಿ ತೃಪ್ತಿಯಾಗದೆ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ, ದಂಪತಿಯ ಆಸ್ತಿ ದಾಖಲೆಗಳನ್ನೂ ಬಲವಂತವಾಗಿ ಪಡೆದಿದ್ದಾರೆ.

ವಂಚನೆ ಮೂಲಕ ಪಡೆದ ಹಣವನ್ನು ಬಳಸಿಕೊಂಡು ಆರೋಪಿತರು ಶ್ರೀಲಂಕಾಕ್ಕೆ ಪ್ರವಾಸ ಹೋಗಿ ಮೋಜು ಮಸ್ತಿ ಮಾಡುತ್ತಿದ್ದರು. ವೃದ್ಧ ದಂಪತಿಯ ಸಮಯೋಚಿತ ದೂರು ಮತ್ತು ಪೊಲೀಸರ ಚುರುಕು ಕಾರ್ಯಾಚರಣೆಯಿಂದ ಆರೋಪಿಗಳು ಬಂಧನಕ್ಕೆ ಒಳಪಟ್ಟಿದ್ದಾರೆ.

ಆರೋಪಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ವಂಚಿತ ಹಣವನ್ನು ಜಪ್ತಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇಂತಹ ವಂಚನೆಗೆ ತಲೆಬಾಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು ಮಾಹಿತಿ ನೀಡಿದರು.