ಮನೆ ರಾಜಕೀಯ ಬಿಜೆಪಿಯವರಿಗೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದು ಅಭ್ಯಾಸ : ಸಿಎಂ ಸಿದ್ದರಾಮಯ್ಯ

ಬಿಜೆಪಿಯವರಿಗೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದು ಅಭ್ಯಾಸ : ಸಿಎಂ ಸಿದ್ದರಾಮಯ್ಯ

0

ಚಿಕ್ಕಬಳ್ಳಾಪುರ: ಬಿಜೆಪಿ ಮುಖಂಡರು ಸದಾ ಸುಳ್ಳು ಪ್ರಚಾರ ಮಾಡಿ ಜನರನ್ನು ದಾರಿ ತಪ್ಪಿಸುತ್ತಾರೆ ಮತ್ತು ರಾಜಕೀಯ ಲಾಭಕ್ಕಾಗಿ ಪ್ರತಿಯೊಬ್ಬರ ರಾಜೀನಾಮೆ ಕೇಳುವುದು ಅವರ ಅಭ್ಯಾಸವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ಅವರು ಗೌರಿಬಿದನೂರು ತಾಲೂಕಿನ ಬೊಮ್ಮಸಂದ್ರ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಬಿಜೆಪಿ ಎಲ್ಲದರಲ್ಲೂ ರಾಜಕೀಯ ಮಾಡೇ ಮಾಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿಯವರಿಗೆ ಎಲ್ಲ ವಿಷಯಗಳಲ್ಲೂ ರಾಜಕೀಯ ಮಾಡುವುದೇ ಬಿಜೆಪಿ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ತಮ್ಮ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಕುಂಭ ಮೇಳದಲ್ಲಿ 40-50 ಜನ ಕಾಲ್ತುಳಿತದಲ್ಲಿ ಸತ್ತರು. ಆಗ ಅಲ್ಲಿನ ಮುಖ್ಯಮಂತ್ರಿಗಳ ರಾಜೀನಾಮೆ ಕೇಳಿದರೇ? ಸೇತುವೆಯೊಂದು ಉದ್ಘಾಟನೆಯಾದ ದಿನವೇ ಬಿದ್ದು 140 ಜನ ಸತ್ತರು ಆಗ ಪ್ರಧಾನಿಗಳ ರಾಜಿನಾಮೆ ಕೇಳಿದರೇ ? ಗೋಧ್ರಾ ಹತ್ಯಾಕಾಂಡದಲ್ಲಿ ಎಷ್ಟು ಜನ ಸತ್ತರು? ಆಗ ಗುಜರಾತ್ ಮುಖ್ಯಮಂತ್ರಿಗಳು ಯಾರಾಗಿದ್ದರು? ಅವರ ರಾಜಿನಾಮೆ ಕೇಳಿದರೇ? ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಸರಬರಾಜು ಮಾಡದೇ 23 ಜನ ಸತ್ತಾಗ ಬಸವರಾಜ ಬೊಮ್ಮಾಯಿ ರಾಜಿನಾಮೆ ನೀಡಿದರೆ ಎಂದು ಮುಖ್ಯಮಂತ್ರಿಗಳು ವಾಗ್ದಾಳಿ ನಡೆಸಿದರು.

ಇಡಿ ದಾಳಿಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, “ಯಾವುದೇ ಕಾನೂನಿನ ಉಲ್ಲಂಘನೆ ನಡೆದಿದ್ದರೆ, ಕಾನೂನು ಪ್ರಕಾರ ಕ್ರಮಕೈಗೊಳ್ಳಲಿ. ಸರ್ಕಾರ ಇದರ ವಿರುದ್ಧ ಅಡ್ಡಿಯಾಗುವುದಿಲ್ಲ” ಎಂದರು.

ಜಾತಿ ಸಮೀಕ್ಷೆ ಕುರಿತಂತೆ ಕೆಲವು ದೂರುಗಳು ಬಂದಿದ್ದು, ವರದಿ ಹಳೆಯದಾಗಿರುವ ಕಾರಣದಿಂದ ಮರುಗಣತಿಯ ತೀರ್ಮಾನ ಕೈಗೊಳ್ಳಲಾಗಿದೆ. “ವರದಿಯನ್ನು ತಾತ್ವಿಕವಾಗಿ ನಾವು ಒಪ್ಪಿಕೊಂಡಿದ್ದೇವೆ, ಆದರೆ ಪಾರ್ಟಿಯ ವರಿಷ್ಠರು ಶೀಘ್ರ ಮರುಗಣತಿಗೆ ಸೂಚನೆ ನೀಡಿದ್ದಾರೆ” ಎಂದರು.

ತುಮಕೂರನ್ನು “ಬೆಂಗಳೂರು ಉತ್ತರ” ಎಂದು ನಾಮಕರಣ ಮಾಡುವ ಪ್ರಸ್ತಾಪ ಗೃಹ ಸಚಿವರಿಂದ ಬಂದಿದೆ. ಇದನ್ನು ಸಚಿವ ಸಂಪುಟದ ಮುಂದೆ ವಿಸ್ತೃತವಾಗಿ ಪರಿಶೀಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ಕಾಲ್ತುಳಿತ ಪ್ರಕರಣದ ತನಿಖೆಗೆ ಸಂಬಂಧಿಸಿ ಏಕ ವ್ಯಕ್ತಿ ಆಯೋಗ ರಚನೆಯಾಗಿದ್ದು, 30 ದಿನಗಳೊಳಗೆ ವರದಿ ನೀಡಲಾಗುವುದು. ಸಿದ್ದರಾಮಯ್ಯ ಈ ಕುರಿತು ಹೆಚ್ಚಿನ ವಿವರಣೆ ನೀಡಲು ಇಚ್ಛಿಸಲಿಲ್ಲ.

ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕ, ವೇತನ ಹೆಚ್ಚಳ ಮತ್ತು ಸೌಲಭ್ಯಗಳ ಅಭಿವೃದ್ಧಿ ಕುರಿತು ಅವರು ಮಾತಾಡಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ ಎಂದರು.

“ಬಡತನ ಕಮ್ಮಿಯಾಗಿದೆ ಎಂಬ ಮೋದಿ ಅವರ ಹೇಳಿಕೆ ಸುಳ್ಳಾಗಿದೆ. ಗರೀಬಿ ಹಟಾವೋ ಮತ್ತು ಇತರ ಯೋಜನೆಗಳಿಂದ ಬಡತನ ಇಳಿದಿದೆ. ಮೋದಿ ಸರ್ಕಾರದಿಂದ ಬಡತನ ನಿರ್ಮೂಲನೆಯಾಗಿಲ್ಲ.” ಬಡತನ ಕಡಿಮೆಯಾಗಿರುವುದಾದರೆ ಅದು ಹಿಂದಿನ ಸರ್ಕಾರಗಳ ಯೋಜನೆಗಳ ಫಲ” ಎಂದು ಹೇಳಿದರು.

ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಈ ವರ್ಷ ಬಂಡವಾಳ ವೆಚ್ಚ 83,000 ಕೋಟಿಗೆ ಏರಿದ್ದು, ಗ್ಯಾರಂಟಿ ಯೋಜನೆಗಳಿಗೆ 50,000 ಕೋಟಿ ಅನುದಾನ ನೀಡಲಾಗಿದೆ. “ಹೀಗಿರುವಾಗ ನಾವು ದಿವಾಳಿ ಆದೆವು ಎಂಬ ಪ್ರಶ್ನೆ ಬರಬೇಕೇ?” ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

“593 ಭರವಸೆಗಳಲ್ಲಿ 242 ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ ಕೇಂದ್ರ ಸರ್ಕಾರ 600 ಭರವಸೆಗಳಲ್ಲಿ ಕೇವಲ ಶೇ.10 ರಷ್ಟನ್ನು ಮಾತ್ರ ಅನುಷ್ಠಾನಗೊಳಿಸಿದೆ” ಎಂದು ಮುಖ್ಯಮಂತ್ರಿ ವಿವರಿಸಿದರು.