ಮಡಿಕೇರಿ : ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆ ವತಿಯಿಂದ ಕುಶಾಲನಗರದಲ್ಲಿ ನೂತನವಾಗಿ ನಿರ್ಮಿಸಿರುವ ಪುರಸಭಾ ಕಚೇರಿ ಕಟ್ಟಡವನ್ನು ಪೌರಾಡಳಿತ ಸಚಿವರಾದ ರಹೀಮ್ ಖಾನ್ ಅವರು ಬುಧವಾರ ಲೋಕಾರ್ಪಣೆಗೊಳಿಸಿದರು.
ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡವನ್ನು ಉದ್ಘಾಟಿಸಿ ನೂತನ ಸಭಾಂಗಣದಲ್ಲಿ ಮಾತನಾಡಿದ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಯೋಜನೆಗಳಿಗೆ 50 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
ಶಾಸಕರಾದ ಡಾ.ಮಂತರ್ ಗೌಡ ಅವರ ಪ್ರಯತ್ನದಿಂದ ಮುಖ್ಯಮಂತ್ರಿ ಅವರು ಹಲವು ಅಭಿವೃದ್ಧಿ ಕಾರ್ಯಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಿದ್ದಾರೆ. ಪೌರಾಡಳಿತ ಇಲಾಖೆಯಿಂದ ಸಹ ಅಗತ್ಯ ಸಹಕಾರ ನೀಡಲಾಗುವುದು ಎಂದು ಸಚಿವರು ಹೇಳಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ಮೂರು ಇಂದಿರಾ ಕ್ಯಾಂಟಿನ್‍ಗಳನ್ನು ಆರಂಭಿಸಲಾಗಿದೆ. ಸದ್ಯ ಬೇಡಿಕೆ ಹೆಚ್ಚಿರುವುದರಿಂದ ಬೆಳಗಿನ ಉಪಾಹಾರ ಮತ್ತು ಊಟವನ್ನು 300 ರಿಂದ 500 ಜನರಿಗೆ ಒದಗಿಸಲು ಉದ್ದೇಶಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಶಾಸಕರಾದ ಡಾ.ಮಂತರ್ ಗೌಡ ಅವರು ಆಗಾಗ ಭೇಟಿಯಾಗಿ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಚರ್ಚಿಸುತ್ತಾರೆ. ಇದರಿಂದ ಇಲಾಖೆಯಿಂದ ಸಾಧ್ಯವಾದಷ್ಟು ಕೆಲಸ ಮಾಡಬೇಕು ಎಂಬುದು ಬರುತ್ತದೆ. ಒಂದು ಕೆಲಸವನ್ನು ಮಾಡಿಸುವಲ್ಲಿ ತುಂಬಾ ಅದ್ಭುತವಾಗಿ ನಿರ್ವಹಿಸುತ್ತಾರೆ ಎಂದು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು. ಪಟ್ಟಣ ಮತ್ತು ನಗರ ಪ್ರದೇಶದ ಅಭಿವೃದ್ದಿ ಕಾರ್ಯಕ್ಕೆ ಕೈಜೋಡಿಸಲಾಗುವುದು. ಕುಶಾಲನಗರ ಪುರಸಭಾ ನೂತನ ಕಟ್ಟಡವನ್ನು ಪುರಸಭೆ ತಮ್ಮ ಸ್ವನಿಧಿಯಿಂದಲೇ ನಿರ್ಮಿಸಿರುವುದು ವಿಶೇಷವೇ ಸರಿ. ಇಂತಹ ಕಾರ್ಯಗಳು ಹೆಚ್ಚು ಹೆಚ್ಚು ಆಗಬೇಕು ಎಂದರು. ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಕುಶಾಲನಗರ ಪುರಸಭೆ ಕಟ್ಟಡ ವಿಶಾಲವಾಗಿದ್ದು, ಮುಂದಿನ ದಿನಗಳಲ್ಲಿ ನಗರಸಭೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕುಶಾಲನಗರ ಬೆಳವಣಿಗೆಗೆ ಮಾಜಿ ಮುಖ್ಯಮಂತ್ರಿಗಳಾದ ಆರ್.ಗುಂಡೂರಾವ್ ಅವರ ಶ್ರಮ ಇದ್ದು, ಕುಶಾಲನಗರ ಪುರಸಭಾ ಕಾರ್ಯಾಲಯ ಆವರಣದಲ್ಲಿ ಆರ್.ಗುಂಡೂರಾವ್ ಅವರ ಪುತ್ಥಳಿಯನ್ನು ನಿರ್ಮಿಸುವಂತಾಗಬೇಕು. ಆ ನಿಟ್ಟಿನಲ್ಲಿ ನಿರ್ಣಯಕೈಗೊಂಡು ಪುತ್ಥಳಿ ನಿರ್ಮಿಸುವಂತಾಗಬೇಕು ಎಂದು ಸಲಹೆ ನೀಡಿದರು. ಜಿಲ್ಲೆಯಲ್ಲಿ ಕುಶಾಲನಗರ ಅಭಿವೃದ್ಧಿಯಲ್ಲಿ ಮುಂದೆ ಇದ್ದು, ಇದನ್ನು ಉಳಿಸಿಕೊಂಡು ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸವನ್ನು ಆಡಳಿತ ವ್ಯವಸ್ಥೆ ಮಾಡಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರ್ವಹಿಸಬೇಕು. ಸಾರ್ವಜನಿಕರಿಗೆ ಸ್ಪಂದಿಸಿದ್ದಲ್ಲಿ ಕುಶಾಲನಗರ ಮತ್ತಷ್ಟು ಬೆಳವಣಿಗೆ ಕಾಣಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಹ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.
ಕುಶಾಲನಗರ ಪುರಸಭೆಗೆ ಹಲವು ಗ್ರಾಮ ಪಂಚಾಯತಿ ಸೇರಿಸಲಾಗಿದ್ದು, ಮುಂದಿನ ದಿನಗಳಲಲ್ಲಿ ಗುಡ್ಡೆಹೊಸೂರು ಗ್ರಾ.ಪಂ.ಸಹ ಪುರಸಭೆ ವ್ಯಾಪ್ತಿಗೆ ಸೇರಿ ನಗರಸಭೆ ಆಗುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದರು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ಯಾರಂಟಿ ಯೋಜನಾ ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಧರ್ ಅವರು ಸುಸಜ್ಜಿತವಾಗಿ ಪುರಸಭಾ ಕಚೇರಿ ಕಟ್ಟಡ ನಿರ್ಮಾಣವಾಗಿದ್ದು, ಶಾಸಕರ ಪ್ರಯತ್ನದಿಂದ ನಿರ್ಮಾಣವಾಗಿದೆ ಎಂದು ಹೇಳಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಉತ್ತಪ್ಪ, ಗ್ಯಾರಂಟಿ ಯೋಜನಾ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಿ ಚಂದ್ರು, ಉಪಾಧ್ಯಕ್ಷರಾದ ಪುಟ್ಟಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಬಿ.ಸುರೇಶ್, ಜಿಲ್ಲಾ ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಕಾರ್ಯಪಾಲಕ ಅಭಿಯಂತರರಾದ ತ್ಯಾಗರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಹೇಶ್, ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಟಿ.ಎಸ್., ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಪುರಸಭೆ ಸದಸ್ಯರು, ಇತರರು ಇದ್ದರು.
ಪದ್ಮಾವತಿ ಪ್ರಾರ್ಥಿಸಿದರು. ಪುರಸಭೆ ಸಿಬ್ಬಂದಿಗಳು ನಾಡಗೀತೆ ಹಾಡಿದರು. ನಂಜುಂಡ ಸ್ವಾಮಿ ರೈತ ಗೀತೆ ಹಾಡಿದರು. ಪುರಸಭಾ ಸದಸ್ಯರಾದ ಅನಂತಕುಮಾರ್ ಸ್ವಾಗತಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್‍ಗೆ ಸಚಿವರಾದ ರಹೀಮ್ ಖಾನ್ ಅವರು ಭೇಟಿ ನೀಡಿ ವೀಕ್ಷಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಪೌರಾಡಳಿತ ಸಚಿವರಾದ ರಹೀಮ್ ಕಾನ್ ಅವರು ಪೌರಾಡಳಿತ ಇಲಾಖೆ ವತಿಯಿಂದ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಇಂದಿರಾ ಕ್ಯಾಂಟೀನ್‍ಗಳು ನಗರೋತ್ಥಾನ ಯೋಜನೆ ಅನುಷ್ಠಾನ ಮತ್ತಿತರ ಪ್ರಗತಿಗೆ ಒತ್ತು ನೀಡಲಾಗಿದೆ. ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.














