ಮನೆ ಮನರಂಜನೆ ‘ಕಾಂತರಾ’ ಚಿತ್ರದಲ್ಲಿ ಅಭಿನಯಿಸಿದ್ದ ಮಿಮಿಕ್ರಿ ಕಲಾವಿದ ವಿಜು ವಿ.ಕೆ. ಹೃದಯಾಘಾತದಿಂದ ಸಾವು!

‘ಕಾಂತರಾ’ ಚಿತ್ರದಲ್ಲಿ ಅಭಿನಯಿಸಿದ್ದ ಮಿಮಿಕ್ರಿ ಕಲಾವಿದ ವಿಜು ವಿ.ಕೆ. ಹೃದಯಾಘಾತದಿಂದ ಸಾವು!

0

ತೀರ್ಥಹಳ್ಳಿ: ಜನಪ್ರಿಯ ‘ಕಾಂತರಾ’ ಚಲನಚಿತ್ರದ ತಂಡದಲ್ಲಿ ಪಾತ್ರವಹಿಸಿದ್ದ ಮತ್ತೊಬ್ಬ ಕಲಾವಿದ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿರುವ ದುಃಖದ ಸುದ್ದಿ ಹೊರಬಿದ್ದಿದೆ. ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ವಿಜು ವಿ.ಕೆ. ಬುಧವಾರ ರಾತ್ರಿ ಆಗುಂಬೆ ಸಮೀಪದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇತ್ತೀಚೆಗಷ್ಟೇ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ಅವರು ಸಹ ಹೃದಯಾಘಾತದಿಂದ ನಿಧನರಾಗಿದ್ದು, ಕನ್ನಡ ಚಿತ್ರರಂಗಕ್ಕೆ ಆಘಾತ ಉಂಟುಮಾಡಿತ್ತು. ಈಗ ಮತ್ತೊಬ್ಬ ಕಲಾವಿದನ ನಿಧನ ಸುದ್ದಿ ಸಿನಿಮಾ ಲೋಕ ಹಾಗೂ ಅಭಿಮಾನಿಗಳಿಗೆ ದುಃಖ ತಂದಿದೆ.

ವಿಜು ವಿ.ಕೆ. ಅವರು ‘ಕಾಂತರಾ’ ಚಲನಚಿತ್ರದ ಶೂಟಿಂಗ್ ಸಂಬಂಧವಾಗಿ ಆಗುಂಬೆ ಸಮೀಪದ ಒಂದು ಹೋಂಸ್ಟೇನಲ್ಲಿ ತಂಗಿದ್ದರು. ಬುಧವಾರ ರಾತ್ರಿ ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆದರೆ ದುರದೃಷ್ಟವಶಾತ್ ಅವರು ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು. ಮೃತದೇಹವನ್ನು ತೀರ್ಥಹಳ್ಳಿ ಜೆ.ಸಿ. ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮಾಹಿತಿ ದೊರಕುತ್ತಿದ್ದಂತೆ ಅವರ ಕುಟುಂಬಸ್ಥರು ಕೇರಳದಿಂದ ತೀರ್ಥಹಳ್ಳಿಗೆ ಆಗಮಿಸುತ್ತಿದ್ದಾರೆ ಎಂದು ತಿಳದು ಬಂದಿದೆ.

ವಿಜು ವಿ.ಕೆ. ನಿಧನದ ಸುದ್ದಿ ಕೇವಲ ಅವರ ಕುಟುಂಬವಷ್ಟೇ ಅಲ್ಲ, ‘ಕಾಂತರಾ’ ಚಿತ್ರತಂಡಕ್ಕೂ ಆಘಾತ ತಂದಿದೆ.