ಮನೆ ರಾಜ್ಯ ಕಾಲ್ತುಳಿತ ಪ್ರಕರಣ: ಮಕ್ಕಳ ಹಕ್ಕುಗಳ ಆಯೋಗದಿಂದ ಸುಮೊಟೋ ಕೇಸ್ ದಾಖಲು

ಕಾಲ್ತುಳಿತ ಪ್ರಕರಣ: ಮಕ್ಕಳ ಹಕ್ಕುಗಳ ಆಯೋಗದಿಂದ ಸುಮೊಟೋ ಕೇಸ್ ದಾಖಲು

0

ಬೆಂಗಳೂರು: ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಜಯಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರ್‌ಸಿಬಿ ತಂಡಕ್ಕೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮ ಭೀಕರ ಕಾಲ್ತುಳಿತದ ಹಿನ್ನೆಲೆಯಲ್ಲಿ ದುರ್ಘಟನೆಯಾಗಿ ಮಾರ್ಪಟ್ಟಿದ್ದು, 11 ಮಂದಿ ಅಭಿಮಾನಿಗಳ ಮರಣ ಸಂಭವಿಸಿದೆ. ಈ ದುರಂತಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಈಗ ಸುಮೊಟೋ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ಕಾಲ್ತುಳಿತದ ಸಂದರ್ಭ ಮಕ್ಕಳಿಗೂ ಹಾನಿಯಾಗಿರುವ ಸಾಧ್ಯತೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಅವರು ಸಿಐಡಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಎಷ್ಟು ಮಕ್ಕಳಿಗೆ ಹಾನಿಯಾಗಿದೆ ಎಂಬ ಬಗ್ಗೆ ಪೂರಕ ಮಾಹಿತಿ ನೀಡಬೇಕೆಂದು ಕೋರಲಾಗಿದೆ.

ಕಾಲ್ತುಳಿತದ ವೇಳೆ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಉಪಸ್ಥಿತರಿದ್ದರು ಎಂಬ ಅನುಮಾನ ವ್ಯಕ್ತವಾಗಿದ್ದು, ಕೆಲವರಿಗೂ ಗಾಯಗಳಾಗಿರುವ ಸಾಧ್ಯತೆಯೂ ಉಂಟು. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಆಯೋಗ ನೇರವಾಗಿ ಹಸ್ತಕ್ಷೇಪ ಮಾಡಿಕೊಂಡು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ಸಿಐಡಿಗೆ ಪತ್ರ ಬರೆದಿದೆ.

ಈ ಪ್ರಕರಣದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಸಮಗ್ರ ತನಿಖೆ ಅಗತ್ಯವಿದೆ ಎಂದು ಒತ್ತಾಯಿಸಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹಲವಾರು ಮಕ್ಕಳ ಹಕ್ಕು ಹೋರಾಟಗಾರರು ಮತ್ತು ಸಾರ್ವಜನಿಕರು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ತಕ್ಷಣದ ಪ್ರತಿಕ್ರಿಯೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಸರಕಾರ ಮತ್ತು ತನಿಖಾ ಸಂಸ್ಥೆಗಳು ಜವಾಬ್ದಾರಿತನದಿಂದ ನಡೆದು, ಸತ್ಯಾಂಶ ಬಹಿರಂಗಪಡಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.