ಮೈಸೂರು(Mysuru): ನಗರದ ಚಾಮರಾಜೇಂದ್ರ ಮೃಗಾಲಯಕ್ಕೆ ಹೊಸ ಅತಿಥಿಗಳು ಆಗಮಿಸಿದ್ದು, ಶೀಘ್ರವೇ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳ್ಳಲಿವೆ.
ಕರ್ನಾಟಕ ಮೃಗಾಲಯ ಪ್ರಾಧಿಕಾರದಿಂದ 23 ಪ್ರಾಣಿಗಳನ್ನು ವಿದೇಶಗಳಿಂದ ತರಿಸಲಾಗಿದ್ದು, ಅವುಗಳನ್ನು ಮೈಸೂರು ಹಾಗೂ ಶಿವಮೊಗ್ಗ ಮೃಗಾಲಯಕ್ಕೆ ನೀಡಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಸಿಂಗಾಪುರದಂದ 8 ಹೆಣ್ಣು ಮತ್ತು 7 ಗಂಡು ಮಂಗಗಳ(ಹಮಾದ್ರಿಯಾಸ್ ಬಬೂನ್ಸ್)ನ್ನು ತರಲಾಗಿದೆ. ಅವರು ಮೂರು ಹೈನಾಗಳನ್ನು ಕೇಳಿದ್ದಾರೆ. ಜೆಕ್ ಗಣರಾಜ್ಯದಿಂದ ಮೂರು ಕಾಂಗರೂ (ವಾಲಬೀಸ್– ಒಂದು ಗಂಡು, ಎರಡು ಹೆಣ್ಣು) ಹಾಗೂ ಎರಡು ಗಂಡು ಹಾಗೂ ಮೂರು ಹೆಣ್ಣು ‘ರಿಂಗ್ ಟೇಲ್ಡ್ ಲೇಮರ್ಸ್’ಗಳನ್ನು ತರಲಾಗಿದೆ. ಇದಕ್ಕೆ ಪ್ರತಿಯಾಗಿ ಅವರು ಏನನ್ನೂ ಕೇಳಿಲ್ಲ. ಕಳೆದ ವರ್ಷ ನಮ್ಮಿಂದ ಜೋಡಿ ಪಕ್ಷಿಗಳನ್ನು ಪಡೆದಿದ್ದರು ಎಂದು ತಿಳಿಸಿದ್ದಾರೆ.
ಸಿಂಗಾಪುರದಿಂದ ತರಲಾದ ಮಂಗಗಳಲ್ಲಿ ಐದನ್ನು (ಮೂರು ಗುಂಡು ಹಾಗೂ ಎರಡು ಹೆಣ್ಣು) ಶಿವಮೊಗ್ಗಕ್ಕೆ ರವಾನಿಸಲಾಗುವುದು. ಈ ಪ್ರಾಣಿಗಳು 9 ದಿನಗಳ ಹಿಂದೆಯೇ ಮೈಸೂರು ತಲುಪಿವೆ. ಅವುಗಳನ್ನು ಕೂರ್ಗಳ್ಳಿಯ ಚಾಮುಂಡಿ ಪುನರ್ವಸತಿ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮಾರ್ಗಸೂಚಿಯಂತೆ 21 ದಿನಗಳವರೆಗೆ ಅವು ಅಲ್ಲಿರಲಿವೆ. ಬಳಿಕ ಅವುಗಳನ್ನು ಮೃಗಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು.