ಮನೆ ರಾಷ್ಟ್ರೀಯ ಕನಸಿನ ಮನೆಗೆ ಕಾಲಿಡುವ ಮೊದಲೇ ಸಾವಿನ ಮನೆಯ ದಾರಿ: ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ನರ್ಸ್ ರಂಜಿತಾ

ಕನಸಿನ ಮನೆಗೆ ಕಾಲಿಡುವ ಮೊದಲೇ ಸಾವಿನ ಮನೆಯ ದಾರಿ: ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ನರ್ಸ್ ರಂಜಿತಾ

0

ಅಹಮದಾಬಾದ್: ಅಹಮದಾಬಾದ್‌ನಲ್ಲಿ ಸಂಭವಿಸಿದ ದುರಂತ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿರುವ ರಂಜಿತಾ ಗೋಪಕುಮಾರನ್ ಯುನೈಟೆಡ್‌ ಕಿಂಗ್‌ಡಂನಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದರು. ಮನೆ ನಿರ್ಮಾಣದ ಮೇಲ್ವಿಚಾರಣೆಗಾಗಿ ಕೇವಲ ಮೂರು ದಿನಗಳ ಹಿಂದೆ ರಜೆ ಮೇಲೆ ಯುನೈಟೆಡ್ ಕಿಂಗ್‌ಡಂನಿಂದ ಕೇರಳಕ್ಕೆ ಬಂದಿದ್ದ ರಂಜಿತಾ ಗೋಪಕುಮಾರನ್ ಅವರು, ಲಂಡನ್‌ಗೆ ಮರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಿವಾಸಿಯಾಗಿರುವ 42 ವರ್ಷದ ರಂಜಿತಾ ಗೋಪಕುಮಾರನ್, ಯುಕೆನಲ್ಲಿ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಕೇರಳ ರಾಜ್ಯ ಆರೋಗ್ಯ ಇಲಾಖೆಯಲ್ಲಿ ನರ್ಸ್‌ ಹುದ್ದೆ ಪಡೆದಿದ್ದ ಅವರು, ಮನೆ ನಿರ್ಮಾಣದ ಮೇಲ್ವಿಚಾರಣೆಗೆ ರಜೆ ಪಡೆದು ಬಂದಿದ್ದರು. ಜುಲೈನಲ್ಲಿ ಗೃಹಪ್ರವೇಶದ ಯೋಜನೆ ಇದ್ದು, ಮನೆಯು ಸಂಪೂರ್ಣ ತಯಾರಾಗಿತ್ತು.

ಲಂಡನ್‌ನಿಂದ ವಾಪಸ್ಸಾಗುತ್ತಿದ್ದ ವೇಳೆ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ನಡೆದ ದುರಂತ ವಿಮಾನ ಅಪಘಾತದಲ್ಲಿ 241 ಜನರು ಸಾವಿಗೀಡಾಗಿದ್ದು, ಅವರಲ್ಲಿ ರಂಜಿತಾ ಕೂಡ ಒಬ್ಬರು. ಈ ವಿಷಯವನ್ನು ಪತ್ತನಂತಿಟ್ಟ ಜಿಲ್ಲಾಧಿಕಾರಿ ಪ್ರೇಮ್ ಕೃಷ್ಣನ್ ಎಸ್. ದೃಢಪಡಿಸಿದ್ದಾರೆ. ಈ ದುರ್ಘಟನೆಯ ಸುದ್ದಿ ಹರಡಿದಾಗಿನಿಂದ ರಂಜಿತಾ ಕುಟುಂಬ ಹಾಗೂ ಸ್ಥಳೀಯ ಜನತೆಯಲ್ಲಿ ಆಘಾತದ ವಾತಾವರಣ ಉಂಟಾಗಿದೆ.

ರಂಜಿತಾ ತಮ್ಮ ವೃತ್ತಿ ಜೀವನದಲ್ಲಿ ಹಲವು ದೇಶಗಳಲ್ಲಿ ಸೇವೆ ಸಲ್ಲಿಸಿದ್ದರು. ಒಮಾನ್‌ನಲ್ಲಿ ಎಂಟು ವರ್ಷಗಳ ಕಾಲ ನರ್ಸ್ ಆಗಿ ಸೇವೆ ಸಲ್ಲಿಸಿದ ನಂತರ, ಯುಕೆಗೆ ತೆರಳಿ ಅಲ್ಲಿಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪತಿ ವಿನೀಶ್ ಸಹ ಒಮಾನ್‌ನಲ್ಲಿ ಇದ್ದು, ಬಳಿಕ ಕುಟುಂಬವು ಕೇರಳಕ್ಕೆ ವಾಪಸ್ಸಾದಾಗ ರಂಜಿತಾ ಮಾತ್ರ ವೃತ್ತಿ ನಿರ್ವಹಣೆಗೆ ಯುಕೆಗೆ ಹೋಗಿದ್ದರು. ಮನೆಯ ನಿರ್ಮಾಣದ ಮೇಲ್ವಿಚಾರಣೆಗಾಗಿ ರಜೆಯ ಮೇಲೆ ಮನೆಗೆ ಬಂದಿದ್ದರು. ಅವರು ಸುಮಾರು ಒಂದು ವರ್ಷದ ಹಿಂದೆ ಯುಕೆಗೆ ತೆರಳಿದಾಗಿನಿಂದ, ಅಲ್ಲಿ ತಮ್ಮ ಕೆಲಸದ ಒಪ್ಪಂದವನ್ನು ಪೂರ್ಣಗೊಳಿಸಲು ಬಯಸುತ್ತಿದ್ದರು. ಕೇರಳಕ್ಕೆ ಮರಳಲು ಮತ್ತು ರಾಜ್ಯ ಆರೋಗ್ಯ ಸೇವೆಯೊಂದಿಗೆ ಕೆಲಸ ಮಾಡಲು ಯೋಜಿಸಿದ್ದರು ಎಂದು ತಿಳಿದು ಬಂದಿದೆ.

ರಂಜಿತಾ ಅವರು ಪತಿ ವಿನೀಶ್, ಇಬ್ಬರು ಶಾಲಾ ಮಕ್ಕಳಾದ ರಿತಿಕಾ ಮತ್ತು ಇಂದುಚೂಡನ್, ಹಾಗೂ ತಾಯಿ ತುಳಸಿಯನ್ನು ಅಗಲಿದ್ದಾರೆ. ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಲು, ಉತ್ತಮ ಮನೆ ಕಟ್ಟಲು ರಂಜಿತಾ ಪ್ರಯತ್ನಿಸುತ್ತಿದ್ದರು. ನಿನ್ನೆ ಇಬ್ಬರು ಮಕ್ಕಳನ್ನ ಸ್ಕೂಲ್‌ಗೆ ಕಳುಹಿಸಿ ಲಂಡನ್‌ಗೆ ಹೊರಟ್ಟಿದ್ದರು. ಜುಲೈನಲ್ಲಿ ಹೊಸ ಮನೆಯಲ್ಲಿ ಬದುಕು ಕಟ್ಟಲು ಕನಸು ಕಂಡಿದ್ದರು. ಜುಲೈನಲ್ಲಿ ಗೃಹಪ್ರವೇಶದ ಪ್ಲ್ಯಾನ್‌ ಮಾಡಿಕೊಂಡಿದ್ದರು. ಮನೆಗೆ ಆಸರೆಯಾಗಿದ್ದ ರಂಜಿತಾ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.