ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದ ಭೀಕರ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 241 ಮಂದಿ ವಿಮಾನದಲ್ಲೇ ಇದ್ದವರಾಗಿದ್ದು, ಉಳಿದವರು ವೈದ್ಯಕೀಯ ಕಾಲೇಜು ಹಾಸ್ಟೆಲ್ ಹಾಗೂ ಸ್ಥಳೀಯ ನಿವಾಸಿಗಳಾಗಿದ್ದಾರೆ ಎಂದು ವರದಿಯಾಗಿದೆ.
AI-171 ಸಂಖ್ಯೆಯ ವಿಮಾನವು ಗುರುವಾರ ಮಧ್ಯಾಹ್ನ ಅಹಮದಾಬಾದ್ನಿಂದ ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದ ಪರಿಣಾಮವಾಗಿ ವಿಮಾನವು ನಿಯಂತ್ರಣ ತಪ್ಪಿ, ನಗರದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೇಲೆ ಬಿದ್ದಿತು. ಸುತ್ತಮುತ್ತಲಿನ ಕಟ್ಟಡಗಳಿಗೂ ಹಾನಿ ಉಂಟುಮಾಡಿದೆ ಎಂದು ಹೇಳಿದ್ದಾರೆ.
ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬ್ರಿಟನ್ನ ನಿವಾಸಿಯಾಗಿರುವ ಭಾರತೀಯ ಮೂಲದ ವಿಶ್ವಾಸ್ ಕುಮಾರ್ ಮಾತ್ರ ಪವಾಡಸದೃಶವಾಗಿ ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ, ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯವರೂ ಈ ದುರಂತದಲ್ಲಿ ಸಾವನ್ನಪ್ಪಿರುವವರ ಪಟ್ಟಿಯಲ್ಲಿ ಇದ್ದಾರೆ ಎಂಬುದು ದೃಢವಾಗಿದೆ.
ಘಟನೆ ನಂತರ ತಕ್ಷಣವೇ ನಡೆಸಲಾದ ಶೋಧ ಕಾರ್ಯದಲ್ಲಿ ಮಹತ್ವದ ಪುರಾವೆಯಾಗಿರುವ ಬ್ಲ್ಯಾಕ್ ಬಾಕ್ಸ್ ಅನ್ನು ಗುರುವಾರ ರಾತ್ರಿ ಪತ್ತೆಹಚ್ಚಲಾಗಿದೆ. ಇನ್ನೊಂದು ಬ್ಲ್ಯಾಕ್ ಬಾಕ್ಸ್ ಹಾಗೂ ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್) ಯನ್ನು ಶೋಧಿಸುವ ಕಾರ್ಯ ಇನ್ನೂ ಮುಂದುವರೆದಿದ್ದು, ಇವು ವಿಮಾನ ಪತನದ ನಿಖರ ಕಾರಣಗಳನ್ನು ತಿಳಿದುಕೊಳ್ಳಲು ಸಹಾಯ ಮಾಡಲಿವೆ.
ಈ ಭೀಕರ ಘಟನೆಗೆ ಕಾರಣಗಳನ್ನು ಪತ್ತೆಹಚ್ಚಲು ಹಾಗೂ ಭವಿಷ್ಯದಲ್ಲಿ ಇಂತಹ ದುರಂತಗಳು ಪುನರಾವೃತ್ತಿಯಾಗದಂತೆ ತಡೆಯಲು ನಾಗರಿಕ ವಿಮಾನಯಾನ ಸಚಿವಾಲಯ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಘಟನೆಯ ಸಮಗ್ರ ಪರಿಶೀಲನೆ ನಡೆಸಿ ಮೂರು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ.
ಈ ಸಮಿತಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿಯ ನೇತೃತ್ವದಲ್ಲಿ ಗೃಹ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ, ಗುಜರಾತ್ ಸರ್ಕಾರದ ಉನ್ನತ ಅಧಿಕಾರಿಗಳು, ಭಾರತೀಯ ವಾಯುಪಡೆ, ಡಿಜಿಸಿಎ, ಬಿಸಿಎಎಸ್, ಐಬಿ ಹಾಗೂ ವಿಧಿವಿಜ್ಞಾನ ಸೇವೆಗಳ ನಿರ್ದೇಶಕರನ್ನು ಸೇರಿಸಲಾಗಿದೆ. ಸಮಿತಿ ಎಟಿಸಿ ದಾಖಲೆಗಳು, ಸಿಬ್ಬಂದಿಯ ಜವಾಬ್ದಾರಿ, ಹಾಗೂ ತಾಂತ್ರಿಕ ದೋಷಗಳ ತಪಾಸಣೆಯನ್ನೂ ಕೈಗೊಳ್ಳಲಿದೆ.














