ಬೆಂಗಳೂರು: ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಗಳನ್ನ ನೆರವೇರಿಸಲು ಅಗತ್ಯವಿರುವ ಹಣವನ್ನು ವ್ಯವಸ್ಥೆಗೊಳಿಸಲು ಅಸಾಧ್ಯವಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಅಸಾಧ್ಯತೆಯನ್ನು ಮುಚ್ಚಿಹಾಕಲು ರಾಜಕೀಯ ಆರೋಪಗಳ ಮೂಲಕ ಕೇಂದ್ರ ಸರಕಾರವನ್ನು ಗುರಿಯಾಗಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, “ಸಿಎಂ ಸಿದ್ದರಾಮಯ್ಯ ಅವರು ಹೊಸದೇನು ಹೇಳಿಲ್ಲ. ಅವರು ಈ ಹಿಂದೆ ಹಲವಾರು ಬಾರಿ ಸುಳ್ಳು ಹೇಳಿದವರೇ. ಈಗ ಅದನ್ನೇ ಪುನರಾವೃತ್ತಿ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರದ ಅನುದಾನ ಶೇ.32 ರಿಂದ ಶೇ.42ಕ್ಕೆ ಹೆಚ್ಚಿಸಿದ್ದು ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿಲ್ಲವೋ ಎಂಬ ಪ್ರಶ್ನೆ ಇದೆ. ಅವರು ಜನರ ಮುಂದೆ ಸತ್ಯವನ್ನು ಮರೆಮಾಚುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಬೊಮ್ಮಾಯಿ ಹೇಳುವ ಪ್ರಕಾರ, 14ನೇ ಹಣಕಾಸು ಆಯೋಗಕ್ಕೆ ಹೋಲಿಕೆ ಮಾಡಿದರೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಕೇಂದ್ರದಿಂದ 1 ಲಕ್ಷ ಕೋಟಿ ರೂ. ಹೆಚ್ಚಿಗೆ ಬರುತ್ತದೆ. ಈಗಾಗಲೇ 14 ನೇ ಹಣಕಾಸು ಆಯೋಗದಲ್ಲಿ ಬಂದಷ್ಟು ಹಣ ರಾಜ್ಯಕ್ಕೆ ಬಂದಿದೆ. ಇನ್ನು ಎರಡು ವರ್ಷ ಬರುತ್ತದೆ. ಗ್ಯಾರೆಂಟಿ ಯೋಜನೆಗೆ ಹಣ ಹೊಂದಿಸಲಾಗದೇ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರಕಾರದ ವಿರುದ್ದ ರಾಜಕೀಯವಾಗಿ ಮಾತನಾಡುತ್ತಾರೆ. ಈ ಸಮಯದಲ್ಲಿ ಸಿಎಂ ಕೇಂದ್ರದ ವಿರುದ್ಧ ಮಾತನಾಡುವುದು ನಿರರ್ಥಕವಾಗಿದೆ” ಎಂದು ಹೇಳಿದರು.
ಯುಪಿಎ ಅವಧಿಯಲ್ಲಿ ರಾಜ್ಯದ ರೈಲ್ವೆ ಯೋಜನೆಗೆ ಕೇವಲ 700 ಕೋಟಿ ರೂ. ಅನುದಾನ ನೀಡಲಾಗಿತ್ತು. ಆದರೆ ಇದೀಗ ಎನ್‌ಡಿಎ ಸರ್ಕಾರ 7700 ಕೋಟಿ ರೂ. ಅನುದಾನ ನೀಡಿದೆ. ಅದಕ್ಕೆ ಸರಿಯಾಗಿ ರಾಜ್ಯದಿಂದ ಮ್ಯಾಚಿಂಗ್ ಗ್ರ್ಯಾಂಟ್ ಕೊಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಫಲವಾಗಿದೆ. ಆರೋಗ್ಯ, ಗ್ರಾಮೀಣಾಭಿವೃದ್ಧಿ, ರಸ್ತೆ ಮುಂತಾದ ಕ್ಷೇತ್ರಗಳಿಗೆ ಕೇಂದ್ರದಿಂದ ಸಾಕಷ್ಟು ಅನುದಾನ ದೊರೆಯುತ್ತಿದೆ. ಆದರೆ ಈ ಬಗ್ಗೆ ರಾಜ್ಯ ಸರ್ಕಾರ ಮೌನ ವಹಿಸಿದೆ ಎಂದು ಬೊಮ್ಮಾಯಿ ಗಂಭೀರ ಆರೋಪ ಮಾಡಿದರು.
ಜಾತಿ ಸಮೀಕ್ಷೆ ನಡೆಸುವ ಅಧಿಕಾರ ಕೇಂದ್ರ ಸರಕಾರಕ್ಕಷ್ಟೆ ಇದೆ ಎಂದು ಸ್ಪಷ್ಟಪಡಿಸಿದ ಬೊಮ್ಮಾಯಿ, “ಸಿಎಂ ಹಿಂದುಳಿದ ವರ್ಗದ ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ. ಅವರು ಹತ್ತು ವರ್ಷಗಳಿಂದ ಸಿಎಂ ಆಗಿದ್ದರೂ, ಈವರೆಗೆ ಈ ಸಮೀಕ್ಷೆ ನಡೆಸಿಲ್ಲ. ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೈಕಮಾಂಡ್ ಅವರನ್ನ ರಕ್ಷಿಸಿದೆ. ಅಂತಿಮ ಜಾತಿ ಸಮೀಕ್ಷೆ ಕೇಂದ್ರದಿಂದಲೇ ನಡೆಯಬೇಕು” ಎಂದು ಹೇಳಿದರು.














