ಮನೆ ರಾಜಕೀಯ 3 ವರ್ಷದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ₹13,000 ಕೋಟಿ ಅನುದಾನ: ಸಿಎಂ ಸಿದ್ದರಾಮಯ್ಯ

3 ವರ್ಷದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ₹13,000 ಕೋಟಿ ಅನುದಾನ: ಸಿಎಂ ಸಿದ್ದರಾಮಯ್ಯ

0

ಯಾದಗಿರಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಕಳೆದ ಮೂರು ವರ್ಷಗಳಲ್ಲಿ ₹13,000 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅವರು ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ “ಆರೋಗ್ಯ ಆವಿಷ್ಕಾರ” ಕಾರ್ಯಕ್ರಮದಲ್ಲಿ 440.63 ಕೋಟಿ ರೂ. ಮೌಲ್ಯದ ಹಲವಾರು ಕಾಮಗಾರಿಗಳನ್ನು ಉದ್ಘಾಟಿಸಿ, ಈ ಮಾಹಿತಿ ನೀಡಿದರು.

ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ, ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪ್ರತಿ ವರ್ಷ ₹5,000 ಕೋಟಿ ನೀಡಲಾಗುವುದು ಎಂಬ ಮಾತಿಗೆ ಅನುಗುಣವಾಗಿ ₹13,000 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಈಗಾಗಲೇ ₹5,300 ಕೋಟಿ ಖರ್ಚು ಆಗಿದ್ದು, ಇದರ ಪ್ರಯೋಜನ ಸ್ಥಳೀಯ ಜನತೆಗೆ ತಲುಪಿದೆ. ಈ ಅನುದಾನದ ಹೊರತಾಗಿ, ವಿವಿಧ ಇಲಾಖೆಗಳ ಮುಖಾಂತರ ಹೆಚ್ಚಿನ ಯೋಜನೆಗಳಿಗೂ ಅನುದಾನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಡಾ.ಡಿ.ಎಂ. ನಂಜುಂಡಪ್ಪ ಅವರ ವರದಿಯ ಆಶಯಗಳನ್ನು ನಮ್ಮ ಸರ್ಕಾರ ಈಡೇರಿಸುತ್ತಿದೆ. ಆರೋಗ್ಯ, ಶಿಕ್ಷಣ, ಉದ್ಯೋಗದಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಸಾಧಿಸುವ ಜೊತೆಗೆ ಮೂಲಭೂತ ಸೌಕರ್ಯಗಳ ಈಡೇರಿಕೆಗೆ ಹಣ ವಿನಿಯೋಗ ಮಾಡಲು ಸೂಚನೆ ನೀಡಿದ್ದೇನೆ. ಇದರ ಪ್ರಕಾರ ಅಕ್ಷರ ಆವಿಷ್ಕಾರ ನಡೆದು ಇಂದು 440.63 ಕೋಟಿ ವೆಚ್ಚದ ಆರೋಗ್ಯ ಆವಿಷ್ಕಾರ ಕಾರ್ಯಕ್ರಮ ಇಂದು ಉದ್ಘಾಟನೆ ಮಾಡಿದ್ದೇವೆ. ಕೊಲ್ಲೂರು ಮಲ್ಲಪ್ಪ ಅವರ ಸ್ಮಾರಕಕ್ಕೆ ಪುಕ್ಕಟೆಯಾಗಿ ಭೂಮಿ ಕೊಡಲಾಗಿದೆ. ಮಲ್ಲಪ್ಪ ಅವರು ಕಲ್ಯಾಣ ಕರ್ನಾಟಕದ ಗಾಂಧಿ ಎಂದು ಕರೆಸಿಕೊಂಡಿದ್ದವರು.  ಸ್ವಾತಂತ್ರ್ಯ ಹೋರಾಟಗಾರರಾದ ಇವರ ಸ್ಮಾರಕ ಕೂಡಲೇ ಆಗಬೇಕು ಎಂದು ಸಿಎಂ ಸೂಚನೆ ನೀಡಿದರು.

“ಆರೋಗ್ಯ ಆವಿಷ್ಕಾರ” ಯೋಜನೆಯಡಿ 42 ಆಸ್ಪತ್ರೆಗಳನ್ನು ನವೀಕರಿಸುವುದರ ಜೊತೆಗೆ ಹೊಸ ಆಸ್ಪತ್ರೆಗಳ ನಿರ್ಮಾಣಕ್ಕೆ ₹847 ಕೋಟಿ ರೂಪಾಯಿಯ ಯೋಜನೆ ರೂಪಿಸಲಾಗಿದೆ ಎಂದು ಸಿಎಂ ತಿಳಿಸಿದರು.

ಬಿಜೆಪಿ ರಾಜ್ಯದಲ್ಲಿ ಅಭಿವೃದ್ಧಿ ನಿಲ್ಲಿಸಿರುವುದು ಎಂದು ಆರೋಪಿಸುತ್ತಿರುವುದು ಸುಳ್ಳು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು. ಅವರು, “ಬೆಲೆ ಏರಿಕೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಕಾರಣ. ಚಿನ್ನ, ಪೆಟ್ರೋಲ್, ಔಷಧ, ಅಡುಗೆ ಅನಿಲ ಇವೆಲ್ಲದರ ಬೆಲೆ ಗಗನಕ್ಕೇರಿದ್ದು ಇದರ ಹಿಂದೆ ಕೇಂದ್ರದ ನಿರ್ಲಕ್ಷ್ಯ ಇದೆ” ಎಂದು ಟೀಕಿಸಿದರು.

371(ಜೆ) ವಿಧಿಯ ಜಾರಿಗೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ ಮತ್ತು ದಿವಂಗತ ಎನ್. ಧರ್ಮಸಿಂಗ್ ಅವರ ಶ್ರಮವಿದೆ ಎಂದು ಸಿಎಂ ಶ್ಲಾಘಿಸಿದರು. ಬಿಜೆಪಿ ಮಾತ್ರ ಈ ವಿಧಿಗೆ ವಿರೋಧ ವ್ಯಕ್ತಪಡಿಸಿತ್ತು. ಎಲ್.ಕೆ. ಅಡ್ವಾಣಿ ಅವರು ಉಪಪ್ರಧಾನಿಯಾಗಿದ್ದಾಗ 371(ಜೆ) ಜಾರಿಗೆ ವಿರೋಧಿಸಿ ಪತ್ರ ಬರೆದಿದ್ದರು ಎಂಬ ಸಂಗತಿಯನ್ನು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ನೆನಪಿಸಿದರು.

ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕದ ಸ್ಥಾನ ಎರಡನೆಯದಾಗಿದ್ದು, ಇದು ರಾಜ್ಯ ಆರ್ಥಿಕವಾಗಿ ಪ್ರಗತಿಯಲ್ಲಿರುವುದಕ್ಕೆ ಸಾಕ್ಷಿ ಎಂದು ಸಿಎಂ ಹೇಳಿದರು. ಈಗಾಗಲೇ ಐದು ಗ್ಯಾರಂಟಿ ಯೋಜನೆಗಳೊಂದಿಗೆ ಸುಮಾರು 200 ಭರವಸೆಗಳನ್ನು ಜಾರಿಗೊಳಿಸಿದ್ದು, ಮುಂದಿನ ಮೂರೂ ವರ್ಷಗಳಲ್ಲಿ ಉಳಿದ ಎಲ್ಲಾ ಭರವಸೆಗಳನ್ನೂ ಈಡೇರಿಸಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರು ಡಾ. ಎಚ್.ಸಿ. ಮಹದೇವಪ್ಪ, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ ಮತ್ತು ಶಾಸಕರಾದ ಅಜಯ್ ಸಿಂಗ್ ಭಾಗವಹಿಸಿದ್ದರು.