ಮಂಡ್ಯ: ಶಿಕ್ಷಣದ ಜೊತೆಗೆ ಸಂಸ್ಕೃತಿ ಬಗ್ಗೆ ಗಮನ ಹರಿಸುವ ಕಡೆ ವಿದ್ಯಾರ್ಥಿಗಳು ನಿರತರಾಗಬೇಕು ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಂ.ವಿನಯ್ಕುಮಾರ್ ಸಲಹೆ ನೀಡಿದರು.
ತಾಲ್ಲೂಕಿನ ಬಸರಾಳು ಗ್ರಾಮದಲ್ಲಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್, ಮಂಡ್ಯ ಅಮೃತ ಅಲಯನ್ಸ್ ಸಂಸ್ಥೆ, ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ, ನಿವೃತ್ತ ಶಿಕ್ಷಕ ಕೆ.ಮಾಯಿಗಶೆಟ್ಟಿ ಸೇವಾ ಸಮಿತಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಅಂತರಾಷ್ಟ್ರೀಯ ದಿನಾಚರಣೆ ಅಂಗವಾಗಿ ನಡೆದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದಾನ ಸಮಾರಂಭ ಹಾಗೂ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಳ್ಳಿಗಳಲ್ಲಿ ದೇವಾಲಯಗಳನ್ನು ಕಟ್ಟುತ್ತೀರಾ, ಆದರೆ ಗ್ರಂಥಾಲಯ ಕಟ್ಟುವ ಕೆಲಸವನ್ನು ಇನ್ನಾದರೂ ಮಾಡಬೇಕು. ದೇವಾಲಯ ನಿರ್ಮಾಣಕ್ಕೆಂದು ಹಣ ಸಂಗ್ರಹಿಸುವ ರೀತಿಯಲ್ಲಿಯೇ ಗ್ರಂಥಾಲಯ ನಿರ್ಮಾಣಕ್ಕೆಂದು ಹಣ ಸಂಗ್ರಹಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ದಿಸೆಯಲ್ಲಿಯೇ ಜಾತಿ ತಾರತಮ್ಯ ಮತ್ತು ಮೇಲು ಕೀಳು ಎಂಬುವ ಭಾವನೆ ಹೋಗಲಾಡಿಸುವ ಶಿಕ್ಷಣವನ್ನು ನೀಡುವುದು ಮುಖ್ಯವಾಗಬೇಕು. ಅದನ್ನು ಶಿಕ್ಷಕರಾದವರು ಅಚ್ಚುಕಟ್ಟಾಗಿ ತಿಳಿಸುವ ಕೆಲಸ ಮಾಡಬೇಕು. ಅಶಾಂತಿ ಉಂಟು ಮಾಡುವವರು ಎಷ್ಟೇ ವಿಚಾರವಂತರಾದರು ಪ್ರಯೋಜನವಿಲ್ಲ. ಪರಿಸರ ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಕಾಡನ್ನು ಸಂರಕ್ಷಿಸುವುದು ಮುಖ್ಯವಾಗಬೇಕು ಎಂದು ತಿಳಿಸಿದರು.
ವೃತ್ತಿ ಶಿಕ್ಷಣಕ್ಕೆ ದಾಖಲಾಗುತ್ತೇನೆ ಎಂಬುವ ವಿಷಯ ಬಿಟ್ಟರೆ ವಿದ್ಯಾರ್ಥಿಗಳಿಗೆ ಅದರಿಂದ ಯಾವ ಪ್ರಯೋಜನವಿದೆ ಎನ್ನುವುದೇ ಗೊತ್ತಿರುವುದಿಲ್ಲ. ಏಕೆಂದರೆ ಕೇವಲ ಉದ್ಯೋಗಕ್ಕಾಗಿ ಓದುವುದು ಎಂಬುದು ಆಗಬಾರದು. ಒಟ್ಟಿನಲ್ಲಿ ತಂದೆ ತಾಯಂದಿರು ಮತ್ತು ಗುರು ಹಿರಿಯರನ್ನು ಗೌರವಿಸುವ ಮನೋಭಾವ ಸಮಾಜದಲ್ಲಿ ಹೆಚ್ಚಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ಸಸಿ ನೆಟ್ಟು ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಎಚ್.ಎಸ್.ಚಂದ್ರಶೇಖರಯ್ಯ, ಅಮೃತ ಲಯನ್ಸ್ ಸಂಸ್ಥೆಯ ಲೋಕೇಶ್, ಎಎಸ್ಐ ಯೋಗೇಂದ್ರ, ಮುಖಂಡರಾದ ವಸಂತ್ಕುಮಾರ್ ಭಾಗವಹಿಸಿದ್ದರು.














