ಮನೆ ಕಾನೂನು ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿಗೆ ಬ್ರೇಕ್ : ರಸ್ತೆಗಿಳಿದರೆ ವಾಹನ ಸೀಜ್!

ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿಗೆ ಬ್ರೇಕ್ : ರಸ್ತೆಗಿಳಿದರೆ ವಾಹನ ಸೀಜ್!

0

ಬೆಂಗಳೂರು: ರಾಜ್ಯದಾದ್ಯಂತ ಹಲವು ತಿಂಗಳಿಂದ ಆಟೋ ಚಾಲಕರು ವರ್ಸಸ್ ಬೈಕ್ ಟ್ಯಾಕ್ಸಿ ವಿಷಯದಲ್ಲಿ ಗದ್ದಲ ನಡೆಯುತ್ತಿದ್ದು, ಇದೀಗ ಈ ವಿವಾದಕ್ಕೆ ನ್ಯಾಯಾಲಯದ ಮೂಲಕ ಅಂತ್ಯ ಸಿಕ್ಕಿದೆ. ಇಂದಿನಿಂದಲೇ ರಾಜ್ಯದಲ್ಲಿ ಅನಧಿಕೃತವಾಗಿ ಓಡಿಸುತ್ತಿರುವ ಬೈಕ್ ಟ್ಯಾಕ್ಸಿಗಳಿಗೆ ನಿಷೇಧ ಹೇರಲಾಗಿದ್ದು, ರಸ್ತೆಗಿಳಿದರೆ ವಾಹನವನ್ನು ಸ್ಥಳದಲ್ಲೇ ಸೀಜ್ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ ಟ್ರಾಫಿಕ್‌ನಲ್ಲಿ ಬೇಗ ತಲುಪಲು, ಕಡಿಮೆ ದರದಲ್ಲಿ ಪ್ರಯಾಣಿಸಲು ಜನರು ಆಯ್ಕೆಮಾಡುತ್ತಿದ್ದ ಬೈಕ್ ಟ್ಯಾಕ್ಸಿಗಳು – ವಿಶೇಷವಾಗಿ ವೈಟ್ ಬೋರ್ಡ್ ವಾಹನಗಳನ್ನು ಬಳಸಿಕೊಂಡು – ಓಲಾ, ಊಬರ್ ಮುಂತಾದ ಪ್ಲಾಟ್‌ಫಾರ್ಮ್‌ಗಳ ಮೂಲಕ ಸೇವೆ ನೀಡುತ್ತಿದ್ದು, ಇದರ ವಿರುದ್ಧ ಕಳೆದ ಕೆಲವು ವರ್ಷಗಳಿಂದ ಆಟೋ ಚಾಲಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು.

ಈ ತಾಳ್ಮೆಯ ಮುನ್ನೋಟದ ನಂತರ, ಏಪ್ರಿಲ್ 2 ರಂದು ಏಕ ಸದಸ್ಯ ಪೀಠವು ಅನಧಿಕೃತ ಬೈಕ್ ಟ್ಯಾಕ್ಸಿಗೆ ತಾತ್ಕಾಲಿಕ ನಿಷೇಧ ಹೇರಿತ್ತು. ಆದರೆ ಓಲಾ, ಊಬರ್ ಸೇರಿದಂತೆ ಹಲವಾರು ಪ್ಲಾಟ್‌ಫಾರ್ಮ್‌ಗಳು ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದರೂ, ಹೈಕೋರ್ಟ್ ವಿಭಾಗೀಯ ಪೀಠವು ಮಧ್ಯಂತರ ತಡೆ ನೀಡುವ ಸಲಹೆಯನ್ನು ನಿರಾಕರಿಸಿದ್ದು, ನಿಷೇಧ ಮುಂದುವರಿಯಲಿದೆ ಎಂಬುದು ಸ್ಪಷ್ಟವಾಗಿದೆ.

ಬಹುತೇಕ ನಾಗರಿಕರು ಬೈಕ್ ಟ್ಯಾಕ್ಸಿಗಳನ್ನು ವೇಗ, ಸುಲಭ ಪ್ರಯಾಣ ಮತ್ತು ಕಡಿಮೆ ವೆಚ್ಚದ ದೃಷ್ಠಿಯಿಂದ ಅನುಕೂಲಕರವೆಂದು ಪರಿಗಣಿಸುತ್ತಿದ್ದರು. ಆದರೆ ವಾಹನಗಳ ನೋಂದಣಿ, ಸುರಕ್ಷತಾ ಕ್ರಮಗಳ ಕೊರತೆ, ಲೈಸೆನ್ಸ್ ಪ್ರಮಾಣೀಕರಣ ಇಲ್ಲದ ಚಾಲಕರು ಸೇರಿದಂತೆ ಹಲವು ಅಂಶಗಳಲ್ಲಿ ಈ ಸೇವೆಗಳು ಕಾನೂನುಬಾಹಿರವಾಗಿವೆ ಎಂಬ ಕಾರಣದಿಂದಾಗಿ ನ್ಯಾಯಾಲಯದಿಂದ ನಿಷೇಧಿಸಲಾಗಿದೆ.

ನ್ಯಾಯಾಲಯದ ತೀರ್ಪನ್ನು ಅನುಸರಿಸಿ, ಸಾರಿಗೆ ಇಲಾಖೆ ಈಗಾಗಲೇ 10 ರಿಂದ 15 ವಿಶೇಷ ತಂಡಗಳನ್ನು ರಚಿಸಿ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿದೆ. ಇಂದಿನಿಂದ ರಸ್ತೆಗಿಳಿಯುವ ಯಾವುದೇ ಅನಧಿಕೃತ ಬೈಕ್ ಟ್ಯಾಕ್ಸಿಯನ್ನು ಸ್ಥಳದಲ್ಲಿಯೇ ಸೀಜ್ ಮಾಡಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.