ಮನೆ ರಾಜ್ಯ ಅಪಾಯದಂಚಿನಲ್ಲಿ ಶ್ರೀರಂಗಪಟ್ಟಣದ ಕೋಟೆ

ಅಪಾಯದಂಚಿನಲ್ಲಿ ಶ್ರೀರಂಗಪಟ್ಟಣದ ಕೋಟೆ

0

ಮಂಡ್ಯ(Mandya): ಶ್ರೀರಂಗಪಟ್ಟಣದ ಸುತ್ತ ಕಾವಲಿನಂತೆ ನಿಂತಿರುವ ಐತಿಹಾಸಿಕ ಕೋಟೆ  ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ಪ್ರಾಮುಖ್ಯತೆ ಪಡೆದಿತ್ತು. ಆದರೀಗ ಕೋಟೆಯು ಸ್ವಲ್ಪ ಪ್ರಮಾಣದಲ್ಲಿ ಕುಸಿಯುತ್ತಲಿದೆ.

ಈಚೆಗೆ ಸುರಿದ ಭಾರಿ ಮಳೆಗೆ ಶ್ರೀರಂಗಪಟ್ಟಣ ಐತಿಹಾಸಿಕ ಕೋಟೆ ಸ್ವಲ್ಪ ಪ್ರಮಾಣದಲ್ಲಿ ಕುಸಿದಿದ್ದು, ಅಪಾಯದ ಅಂಚಿಗೆ ತಲುಪಿದೆ. ಪಟ್ಟಣದ ಪುರಸಭೆಗೆ ಹೊಂದಿಕೊಂಡಿರುವ ಬೆಂಗಳೂರು ಮಾರ್ಗದ ಕೋಟೆ ಗೋಡೆಗೆ ಸುಮಾರು 40 ಅಡಿ ಎತ್ತರದಿಂದ ಅಳವಡಿಸಿದ್ದ ಸೈಜುಕಲ್ಲು ಹಾಗೂ ಅಪಾರ ಪ್ರಮಾಣದ ಮಣ್ಣು ವಾರದ ಹಿಂದೆಯೇ ಕುಸಿದು ಬಿದ್ದಿದೆಯಾದರೂ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಶಿಥಿಲವಾಗಿದ್ದ ಕೋಟೆ ಗೋಡೆಯನ್ನು ಎರಡು ವರ್ಷದ ಹಿಂದೆ ದುರಸ್ತಿ ಮಾಡಲಾಗಿತ್ತು. ಹೊಸದಾಗಿ ಸೈಜುಗಲ್ಲುಗಳನ್ನು ಜೋಡಿಸಿ ಮಣ್ಣು ತುಂಬಲಾಗಿತ್ತು. ಅದೇ ಜಾಗದಲ್ಲಿ ಕೋಟೆ ಗೋಡೆ ಕುಸಿದು ಬಿದ್ದಿದೆ. ಪುರಾತತ್ವ ಇಲಾಖೆ ಲಕ್ಷಾಂತರ ರೂ. ವೆಚ್ಚ ಮಾಡಿ ದುರಸ್ತಿ ಮಾಡಿಸಿದರೂ ಕೋಟೆ ಗೋಡೆ ಕುಸಿದು ಬಿದ್ದಿರುವುದು ಸ್ಥಳೀಯರು ಹಾಗೂ ಸ್ಮಾರಕ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ದುರಸ್ತಿ ವೇಳೆ ಕಳಪೆ ಕಾಮಗಾರಿ ನಡೆಸಲಾಗಿದೆ. ಹಾಗಾಗಿಯೇ ಕೋಟೆ ಗೋಡೆ ಮಳೆಗೆ ಕುಸಿದು ಬಿದ್ದಿದೆ. ಈ ಸಂಬಂಧ ಪುರಾತತ್ವ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಕೋಟೆ ದುರಸ್ತಿ ಕಾಮಗಾರಿ ವೇಳೆ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಶ್ರೀರಂಗಪಟ್ಟಣದಲ್ಲಿ ಕ್ರಿ.ಶ. 1454ರಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತಗಾರ ತಿಮ್ಮಣ್ಣನಾಯಕ ಕಾಲದಲ್ಲಿ ಶ್ರೀರಂಗಪಟ್ಟಣ ಸುತ್ತಲೂ ಮೂರು ಸುತ್ತಿನ ಕೋಟೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ನಂತರ ಮೈಸೂರು ಒಡೆಯರ್‌ ವಂಶಸ್ಥರು ಕೋಟೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿದ್ದಾರೆ. ಟಿಪ್ಪು ಸುಲ್ತಾನ್‌ ಆಡಳಿತದಲ್ಲಿಯೂ ಆನೆ ಕೋಟೆ ಮಾರ್ಗದಲ್ಲಿ ಕೋಟೆ ಅಭಿವೃದ್ಧಿ ಮಾಡಲಾಗಿದೆ ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

ಶ್ರೀರಂಗಪಟ್ಟಣ ಸುತ್ತ ಸುಮಾರು ಮೂರು ಸುತ್ತಿನ ಕೋಟೆ ನಿರ್ಮಾಣ ಮಾಡಲಾಗಿದೆ. ಸುತ್ತಲೂ ಕಂದಕ ನಿರ್ಮಾಣ ಮಾಡಲಾಗಿದೆ. ನೂರಾರು ವರ್ಷಗಳ ಹಿಂದಿನಿಂದಲೂ ಕೋಟೆ ಸುರಕ್ಷಿತವಾಗಿದೆ. ಇದೀಗ ಸೂಕ್ತ ನಿರ್ವಹಣೆ ಇಲ್ಲದೆ ಅಲ್ಲಲ್ಲಿ ಗಿಡ, ಗಂಟಿಗಳು ಬೆಳೆದು ನಿಂತಿವೆ. ಕೆಲವು ಕಡೆ ಕೋಟೆ ಗೋಡೆ ಕುಸಿದು ಬಿದ್ದು ಅವಸಾನದ ಅಂಚಿಗೆ ತಲುಪುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಕುಸಿದಿರುವ ಕೋಟೆ ಗೋಡೆಯನ್ನು ಯಥಾಸ್ಥಿತಿಯಲ್ಲಿ ಅಭಿವೃದ್ಧಿ ಮಾಡಬೇಕು. ಮುಂದಿನ ಪೀಳಿಗೆಗೂ ಸ್ಮಾರಕ ಉಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.