ಹೊಸದಿಲ್ಲಿ: ಭಾರತದಲ್ಲಿ 2011ರ ನಂತರ ಮೊದಲ ಬಾರಿಗೆ 2027ರ ಜನಗಣತಿಗಾಗಿ ಕೇಂದ್ರ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಬಹು ನಿರೀಕ್ಷಿತ ಈ 16ನೇ ರಾಷ್ಟ್ರೀಯ ಜನಗಣತಿ ಕಾರ್ಯಾಚರಣೆ ಎರಡು ಹಂತಗಳಲ್ಲಿ ನಡೆಯಲಿದ್ದು, ಜಾತಿ ಗಣತಿಯನ್ನೂ ಇದರ ಭಾಗವನ್ನಾಗಿಸಲಾಗಿದೆ. (ಇಂದು) ಜೂನ್ 16, 2025ರಂದು ಈ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸಲಾಗಿದೆ.
ಹಿಮಪಾತದ ಪ್ರದೇಶವಾದ ಲಡಾಕ್‌ನಲ್ಲಿ ಈ ಗಣತಿ ಅಕ್ಟೋಬರ್ 1, 2026ರಿಂದ ಆರಂಭವಾಗಲಿದೆ. ಇತರ ಭಾಗಗಳಲ್ಲಿ ಜನಗಣತಿ 2027ರ ಮಾರ್ಚ್ 1ರಿಂದ ಪ್ರಾರಂಭವಾಗಲಿದ್ದು, ದೇಶದಾದ್ಯಂತ ಬೃಹತ್ ಸಂಖ್ಯೆಯ ಜನರ ಅಂಕಿಅಂಶಗಳ ಸಂಗ್ರಹಕ್ಕೆ ಚಾಲನೆ ಸಿಗಲಿದೆ.
ಈ ಭಾರಿ ಜನಗಣತಿಯು ಡಿಜಿಟಲ್ ಮಾಧ್ಯಮಗಳ ಬಳಕೆ ಸಹಿತವಾಗಿ ನಡೆಯಲಿದ್ದು, 34 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರು, ಹಾಗೂ 1.3 ಲಕ್ಷ ಜನಗಣತಿ ಅಧಿಕಾರಿಗಳು ಈ ಕಾರ್ಯದಲ್ಲಿ ತೊಡಗಿಸಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರವಿವಾರ ಜನಗಣತಿಯ ಪೂರ್ವಸಿದ್ಧತೆಗಳ ಪರಿಶೀಲನೆ ನಡೆಸಿದ್ದು, ಗೃಹ ಕಾರ್ಯದರ್ಶಿ, ಜನರಲ್ ರಿಜಿಸ್ಟ್ರಾರ್ ಹಾಗೂ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಸಹಿತ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಜನಗಣತಿ ಕಾರ್ಯಾಚರಣೆ ಎರಡು ಹಂತಗಳಲ್ಲಿ ನಡೆಯಲಿದೆ:
- ಮನೆ ಪಟ್ಟಿ ಕಾರ್ಯಾಚರಣೆ: ಮೊದಲ ಹಂತದಲ್ಲಿ ಮನೆಗಳ ವಾಸ್ತವ್ಯ ಪರಿಸ್ಥಿತಿ, ಸೌಲಭ್ಯಗಳು ಮತ್ತು ಆಸ್ತಿಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
- ಜನಸಂಖ್ಯಾ ಗಣತಿ: ಎರಡನೇ ಹಂತದಲ್ಲಿ ಪ್ರತಿ ಮನೆಯ ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಜಾತಿಯ ಮಾಹಿತಿಯನ್ನೂ ಒಳಗೊಂಡಂತೆ ಸಂಪೂರ್ಣ ವಿವರಗಳು ದಾಖಲಿಸಲಾಗುತ್ತದೆ.
ಈ ಬಾರಿ ಜನಗಣತಿಯ ಭಾಗವಾಗಿ ಜಾತಿ ಆಧಾರಿತ ಗಣತಿ ಸಹ ಸೇರ್ಪಡೆಗೊಂಡಿದ್ದು, ಇದು ಹಲವು ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಕಾನೂನುಬದ್ಧ ತೀರ್ಮಾನವನ್ನಾಗಿ ಪರಿಗಣಿಸಲಾಗಿದೆ.
ಕೇಂದ್ರ ಸರ್ಕಾರದ ಹೇಳಿಕೆಯಂತೆ, ಜನಗಣತಿಯ ವೇಳೆಯಲ್ಲಿ ಸಂಗ್ರಹವಾಗುವ ದತ್ತಾಂಶವು ಅತ್ಯಂತ ಸಂವೇದನಶೀಲವಾಗಿರುವುದರಿಂದ ಕಠಿಣ ದತ್ತಾಂಶ ಭದ್ರತಾ ಕ್ರಮಗಳು ಜಾರಿಯಲ್ಲಿಡಲಾಗುತ್ತವೆ.














