ಮೈಸೂರು: ಮುಂದಿನ ಮೂರು ತಿಂಗಳಲ್ಲಿ ಜಾತಿಗಣತಿ ಸಮೀಕ್ಷೆ ಪೂರ್ಣಗೊಳ್ಳಲಿದ್ದು, ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.
ಮೈಸೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ತಿಂಗಳಲ್ಲಿ ಸಮೀಕ್ಷೆ ಪೂರೈಸಲಿದೆ. ಎಲ್ಲರ ಅಭಿಪ್ರಾಯದ ಮೇರೆಗೆ ಜಾತಿಗಣತಿ ಪುನರ್ ಸಮೀಕ್ಷೆ ತೀರ್ಮಾನಿಸಲಾಗಿದೆ. ಇಲ್ಲಿನ ಸಂಸದರು ಸಮಿತಿಯ ಹಿಂದಿನ ಸರ್ವೇ ಕಸದ ಬುಟ್ಟಿ ಸೇರಿದೆ ಎಂದಿದ್ದಾರೆ. ಆದರೆ, ಸಮೀಕ್ಷೆ ವರದಿ ಜಾರಿಗೆ ಬಂದಾಗ ವಿರೋಧಿಸಿದವರು ಇವರೇ ಆಗಿದ್ದಾರೆ. ನಮಗೆ ನೂರಕ್ಕೆ ನೂರು ಸಮೀಕ್ಷೆ ಸರಿಯಾಗಿತ್ತು ಎಂಬುದನ್ನು ಒಪ್ಪುತ್ತೇವೆ. ಈಗಲೂ ಆ ವರದಿಗೆ ಯಾವುದೇ ತೊಂದರೆಯಿಲ್ಲ. ಸಮೀಕ್ಷೆ ಎಲ್ಲಾ ಸಮುದಾಯದವರು ಅಪಸ್ವರ ಎತ್ತಿದ್ದರಿಂದ ನಾವು ವಿರೋಧ ಮಾಡಿದೆವು. ಹೀಗೆ ಮರು ಸಮೀಕ್ಷೆಗೆ ಎಲ್ಲರ ಒತ್ತಾಸೆ ಮೇರೆಗೆ ಮಾಡಲಾಗಿದೆ ಎಂದರು.
ಇನ್ನೂ ಸಿಎಂ ಬದಲಾವಣೆ ವಿಚಾರವಾಗಿ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಸಿಎಂ, ಡಿಸಿಎಂ ಇಬ್ಬರೂ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಾರೆ. ಬಿಜೆಪಿಯಲ್ಲೇ ಮನೆಯೊಂದು ಮೂರು ಬಾಗಿಲ್ಲಂತೆ ಆಗಿದ್ದಾರೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆಯಿಲ್ಲ. ಅದೆಲ್ಲವೂ ಬಿಜೆಪಿಯದಾಗಿದೆ. ವಿಶ್ವನಾಥ್ ಅವರ ಹೇಳಿಕೆಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಅಮ್ಯೂಸ್ ಪಾರ್ಕ್ ರೈತರಿಗೆ ಸಮಸ್ಯೆ ಆಗುವುದಾದರೆ ಬೇಡ ಎನ್ನುತ್ತೇನೆ. ಬೇರೆ ದೇಶದಲ್ಲಿ ನೋಡಿದಾಗ ಜಲಾಶಯಗಳಲ್ಲಿ ವೈಭವಿತ ಜಲಕಾರಂಜಿಗಳಿವೆ. ಅವುಗಳನ್ನು ಇಲ್ಲಿಗೆ ತರುವುದು ಉತ್ತಮ ಪ್ರಯತ್ನವಾಗಿದೆ. ಕಾವೇರಿ ಆರತಿ ಮಾಡುವುದು ಉತ್ತಮ ಬೆಳವಣಿಗೆಯಾಗಿದೆ. ಆದರೆ, ರೈತರ ಹೆಸರಿನಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆಯನ್ನು ನಾವು ಒಪ್ಪುವುದಿಲ್ಲ ಎಂದರು














