ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆ ಬೆಂಗಳೂರು ನಗರದಲ್ಲಿ ಅನಧಿಕೃತವಾಗಿ ಸಂಚರಿಸುತ್ತಿದ್ದ ಬೈಕ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ನಿನ್ನೆ ಒಂದೇ ದಿನ 103 ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ನೀಡಿದ ಸ್ಪಷ್ಟ ಆದೇಶದ ಪ್ರಕಾರ, ರಾಜ್ಯದಲ್ಲಿ ಯಾವುದೇ ರೀತಿಯ ಬೈಕ್ ಟ್ಯಾಕ್ಸಿ ಸೇವೆ ಕಾನೂನುಬದ್ಧವಲ್ಲ ಎಂಬುದಾಗಿ ಘೋಷಿಸಲಾಗಿದೆ.
ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆ ಹಲವಾರು ಬಾರಿ ಬೈಕ್ ಟ್ಯಾಕ್ಸಿ ಸೇವೆಗಳ ವಿರುದ್ಧ ಎಚ್ಚರಿಕೆ ನೀಡಿದ್ದರೂ ಸಹ, ಕೆಲವು ಬೈಕ್ ಟ್ಯಾಕ್ಸಿ ಆ್ಯಪ್ಗಳು ಮತ್ತು ಚಾಲಕರು ನಿಯಮವನ್ನು ಮೀರಿ ತಮ್ಮ ಸೇವೆ ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದ್ದು, ಬೈಕ್ ಟ್ಯಾಕ್ಸಿ ಸಂಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಹೇಳಿದೆ.
ಆರ್ಟಿಒ ಅಡಿಷನಲ್ ಕಮೀಷನರ್ ಮಲ್ಲಿಕಾರ್ಜುನ ಅವರು ಈ ಕುರಿತು ಮಾಹಿತಿ ಹಂಚಿಕೊಂಡು, “ಹೈಕೋರ್ಟ್ ನಿಷೇಧದ ಹೊರತಾಗಿಯೂ ಅನಧಿಕೃತವಾಗಿ ಸಂಚರಿಸುತ್ತಿದ್ದ ಬೈಕ್ ಟ್ಯಾಕ್ಸಿಗಳನ್ನು ತಕ್ಷಣವೇ ಹಿಡಿದಿದ್ದು, ನಿನ್ನೆ ಒಂದೇ ದಿನ 103 ವಾಹನಗಳು ಸೀಜ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈತರಹದ ನಿಯಮ ಉಲ್ಲಂಘನೆ ಮಾಡಿದರೆ ಅಂತಹ ವಾಹನಗಳ ವಿರುದ್ಧ ಕ್ರಮ ಮುಂದುವರಿಸಲಾಗುವುದು” ಎಂದು ಹೇಳಿದ್ದಾರೆ.
ವೈಟ್ ಬೋರ್ಡ್ ವಾಹನವನ್ನು ಕಮರ್ಷಿಯಲ್ ಸೇವೆಗೆ ಬಳಸಲು ಅವಕಾಶವಿಲ್ಲ. ಸರ್ಕಾರ ಅಥವಾ ಸಾರಿಗೆ ಇಲಾಖೆ ಯಾವುದೇ ಮಾದರಿಯ ಬೈಕ್ ಟ್ಯಾಕ್ಸಿ ಸೇವೆಗೆ ಇನ್ನೂ ಪರವಾನಗಿ ನೀಡಿಲ್ಲ. ಅದ್ದರಿಂದ ಯಾವುದೇ ಕಂಪನಿಗಳು ಅಥವಾ ಚಾಲಕರು ಈ ಸೇವೆಯನ್ನು ಮುಂದುವರೆಸಿದರೆ, ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.














