ಯಳಂದೂರು: ಪಟ್ಟಣದ ಅಗ್ರಹಾರ ಬೀದಿಯಲ್ಲಿ ಕಳೆದ ಹಲವು ತಿಂಗಳಿಂದಲೂ ಚರಂಡಿಯ ಸಮಸ್ಯೆ ಇದ್ದು ಇದನ್ನು ನಿವಾರಿಸುವಂತೆ ಇಲ್ಲಿನ ವಾಸಿಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಇಲ್ಲಿನ ಮುಖಂಡ ಶಿವಕುಮಾರ ಮಾತನಾಡಿ, ಇಲ್ಲಿನ ಚರಂಡಿಗೆ ಸ್ಲಾಬ್ ಮುಚ್ಚಲಾಗಿದ್ದು ಇದರ ಮೇಲೆಯೇ ಕಾಂಕ್ರೀಟು ರಸ್ತೆ ಮಾಡಲಾಗಿದೆ. ಕೆಲವು ಕಡೆ ಇದಕ್ಕೆ ಹಾಕಿದ್ದ ಸ್ಲಾಬ್ ಕಿತ್ತು ಬಿದ್ದಿದ್ದು ಚರಂಡಿ ನೀರೆಲ್ಲಾ ರಸ್ತೆ ಮೇಲೆ ಹರಿಯುತ್ತಿದೆ. ಮನೆ ಮುಂಭಾಗದಲ್ಲಿ ಇದನ್ನೇ ತುಳಿದು ಹೋಗುವ ಪರಿಸ್ಥಿತಿ ಇದೆ. ಮಳೆ ಬಂದರೆ ಈ ಸಮಸ್ಯೆ ಮತ್ತಷ್ಟು ಉಲ್ಭಣಿಸುತ್ತಿದೆ. ಈ ಸ್ಥಳ ಸೊಳ್ಳೆ, ಕ್ರಿಮಿಕೀಟಗಳ ಆವಾಸ ಸ್ಥಾನವಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮ ವಹಿಸಿಲ್ಲ. ಇದರ ಹೂಳು ತೆಗೆಸಿ ನೀರು ಸರಾಗವಾಗಿ ಸಾಗುವಂತೆ ಮಾಡಬೇಕು. ಅಲ್ಲದೆ ಇದೇ ಬೀದಿಯಲ್ಲಿರುವ ಸಂತೆಮಾಳ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಹಾಗಾಗಿ ಇಲ್ಲಿನ ವಾಸಿಗಳಿಗೆ ಸಮಸ್ಯೆಯಾಗಿದ್ದು ಇದನ್ನು ನಿವಾರಿಸಬೇಕು. ಅಲ್ಲದೆ ಇಲ್ಲಿರುವ ಶೌಚಗೃಹವನ್ನು ಒಬ್ಬ ವ್ಯಕ್ತಿಯು ಮನೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ಬಗ್ಗೆ ಮುಖ್ಯಾಧಿಕಾರಿ ಎಂ.ಪಿ. ಮಹೇಶ್ಕುಮಾರ ಮಾತನಾಡಿ, ಇಲ್ಲಿನ ಚರಂಡಿಯನ್ನು ದುರಸ್ತಿ ಮಾಡಲು ಸೂಕ್ತ ಕ್ರಮ ವಹಿಸಲಾಗುವುದು. ಚರಂಡಿಗೆ ಯಾರೂ ಕೂಡ ಶೌಚಗೃಹದ ಪೈಪ್ನ್ನು ಬಿಡಬಾರದು ಇದು ಕ್ರಿಮಿನಲ್ ಅಪರಾಧವಾಗಿದೆ. ಇದು ಕಂಡುಬಂದಲ್ಲಿ ಇವರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು ಎಂದರು ಅಲ್ಲದೆ ಸಂತೆಮಾಳದ ಸಮಸ್ಯೆ, ಶೌಚಗೃಹದ ಸಮಸ್ಯೆಯನ್ನು ನಿವಾರಿಸಲು ಕ್ರಮ ವಹಿಸುವ ಭರವಸೆ ನೀಡಿದರು.
ಪಪಂ ಸದಸ್ಯರಾದ ಮಹೇಶ್, ಮಹದೇವನಾಯಕ ಮಾಜಿ ಸದಸ್ಯ ನಾಗರಾಜು ಮುಖಂಡರಾದ ಗೋವಿಂದರಾಜು, ಮುಕೇಶ್, ನಾಗಶಯನ, ಕಾನಾರಾಮ್, ಕೃಷ್ಣ ಸೇರಿದಂತೆ ಅನೇಕರು ಇದ್ದರು.














