ಬೆಂಗಳೂರು: ನಂದಿನಿ ಹಾಗೂ ಅಮುಲ್ ಎರಡೂ ಕೂಡಾ ನಮ್ಮದೇ ದೇಶದ ಬ್ರ್ಯಾಂಡ್‌ಗಳು. ನಂದಿನಿ ನಮ್ಮ ರಾಜ್ಯದ್ದಾಗಿದೆ. ಎರಡು ಕೂಡಾ ರೈತರ ಸಂಸ್ಥೆಗಳಾಗಿದ್ದು, ಇಲ್ಲಿ ದ್ವೇಷ ಮಾಡುವ ಅಗತ್ಯವಿಲ್ಲ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಹೇಳಿದ್ದಾರೆ.
ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆಗಳ ಸ್ಥಾಪನೆಗೆ ಅವಕಾಶ ನೀಡಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ನಂದಿನಿಗೆ ಮೊದಲು ಆದ್ಯತೆ ನೀಡಬೇಕು. ನಂದಿನಿಗೆ ಅವಕಾಶ ಕೊಡದೇ ನಿರಾಕರಿಸಿದರೆ ಅದು ತಪ್ಪಾಗುತ್ತದೆ. ಆದರೆ ಎರಡೂ ಕೂಡಾ ಸ್ಪರ್ಧೆಯಲ್ಲಿದೆ. ಅಮುಲ್ ಹಾಗೂ ನಂದಿನಿ ಸಂಸ್ಥೆಗಳು ವಿಲೀನ ಆಗುವ ಬಗ್ಗೆ ಹಿಂದೆ ಚರ್ಚೆ ಆಗಿತ್ತು. ನಂದಿನಿಯ ಒಳ್ಳೆಯ ಟೆಕ್ನಾಲಜಿಯನ್ನು ಅಮುಲ್ ಬಳಸಿಕೊಳ್ಳಬೇಕು. ಅಮುಲ್‌ನ ಒಳ್ಳೆಯ ಟೆಕ್ನಾಲಜಿಯನ್ನು ನಂದಿನಿ ಅಳವಡಿಸಿಕೊಳ್ಳಬೇಕು ಎಂದರು.
ನಮ್ಮ ನಂದಿನಿ ಬೇರೆ ಕಡೆಗಳಲ್ಲೂ ಮಳಿಗೆ ತರೆದಿದೆ. ಉತ್ತರ ಪ್ರದೇಶ, ದೆಹಲಿ, ಮುಂಬೈನಲ್ಲೂ ಮಳಿಗೆಗಳನ್ನು ತೆರೆದಿದೆ. ಅದು ತನ್ನ ಸಾಮರ್ಥ್ಯವನ್ನು ಗಳಿಸಿಕೊಳ್ಳೋದು. ಸ್ಪರ್ಧೆಯಲ್ಲೂ ಭಾಗವಹಿಸಿ ಮೆಟ್ರೋ ಮಾತ್ರ ಅಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲೂ ತನ್ನ ಮಳಿಗೆಗಳನ್ನು ತೆರೆಯಿವಷ್ಟು ಸಾಮರ್ಥ್ಯ ನಂದಿನಿಗೆ ಬರಲಿ ಎಂದು ನಾನು ಆಶಿಸುತ್ತೇನೆ. ಇದಕ್ಕೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ಹಾಗೂ ಬಿಎಂಆರ್‌ಸಿಎಲ್ ಚಿಂತನೆ ಮಾಡಬೇಕು. ಎಲ್ಲೆಲ್ಲಿ ಅಮುಲ್ ಮಳಿಗೆಗೆ ಅವಕಾಶ ಕೊಟ್ಟಿದ್ದೀರಿ ನಂದಿನಿಗೂ ಮಳಿಗೆಯನ್ನು ಮೀಸಲಿಡಿ. ಆಗ ನಂದಿನಿಯೂ ಇರುತ್ತದೆ, ಅಮುಲ್ ಕೂಡಾ ಇರುತ್ತದೆ. ಸ್ಪರ್ಧೆ ಚೆನ್ನಾಗಿ ಆಗುತ್ತದೆ. ಆರೋಗ್ಯಕರ ಸ್ಪರ್ಧೆ ಇರುತ್ತದೆ. ಇದು ನನ್ನ ಸಲಹೆ. ಎಲ್ಲದಕ್ಕೂ ಟೀಕೆ, ರಾಜಕಾರಣ ಮಾಡುವ ಉದ್ದೇಶ ನನಗಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.














