ಮನೆ ಅಪರಾಧ ಬಳ್ಳಾರಿ: ಪತಿಯೊಂದಿಗೆ ಜಗಳ : ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು

ಬಳ್ಳಾರಿ: ಪತಿಯೊಂದಿಗೆ ಜಗಳ : ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು

0

ಬಳ್ಳಾರಿ: ಕ್ಷುಲ್ಲಕ ಕಾರಣಕ್ಕೆ ಪತಿಯೊಂದಿಗೆ ಜಗಳವಾಡಿದ ಪತ್ನಿ ತನ್ನ ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಜಿಗಿದು ಆತ್ಮಹತ್ಯೆಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬಳ್ಳಾರಿಜಿಲ್ಲೆ ಕುರುಗೋಡು ತಾಲೂಕಿನ ಬರದನಹಳ್ಳಿಯಲ್ಲಿ ನಡೆದಿದೆ.ಬೆಳಗಾವಿಮೂಲದ ತಾಯಿ ಸಿದ್ದಮ್ಮ (30) ತನ್ನ ಜೊತೆಗೆ ಮಕ್ಕಳಾದ ಅಭಿಗ್ನ(8), ಅವಣಿ(6), ಆರ್ಯ(4) ಕೃಷಿ ಹೊಂಡಕ್ಕೆ ತಳ್ಳಿ ಬಳಿಕ ತಾನೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕುರಿ ಮೇಯಿಸಲು ಬೆಳಗಾವಿಯಿಂದ ಬರದನಹಳ್ಳಿಗೆ ಬಂದಿದ್ದ ಕುಮಾರ್‌ ಮತ್ತು ಸಿದ್ದಮ್ಮ ದಂಪತಿ ಜಗಳವಾಡಿಕೊಂಡಿದ್ದಾರೆ. ಈ ವೇಳೆ ಗಂಡ ಹೆಂಡತಿ ನಡುವೆ ಜಗಳ ನಡೆದಿದೆ. ಇದರಿಂದ ಮನನೊಂದು ಸಿದ್ದಮ್ಮ ಮಕ್ಕಳ ಜತೆ ಸಾವಿಗೆ ಶರಣಾಗಿದ್ದಾಳೆ.

ಕುಮಾರ್‌ ದಂಪತಿ ಬರದನಹಳ್ಳಿಯ ರಾಘವೇಂದ್ರ ಅವರ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದರು. ಜಗಳ ನಡೆದ ನಂತರ ಮೊದಲು ಸಿದ್ದಮ್ಮ ತನ್ನ ಮಕ್ಕಳನ್ನು ಕೃಷಿ ಹೊಂಡಕ್ಕೆ ತಳ್ಳಿ ನಂತರ ತಾನೂ ಹೊಂಡಕ್ಕೆ ಜಿಗಿದಿದ್ದಾಳೆ.

ಸಂಜೆಯಾದರೂ ಪತ್ನಿ, ಮಕ್ಕಳು ಮತ್ತು ಕುರಿಗಳು ಹಿಂತಿರುಗದ ಕಾರಣ ಕುಮಾರ್‌ ಹುಡುಕಾಟ ನಡೆಸಿದ್ದಾನೆ. ಕುರಿಗಳು ಕೃಷಿ ಹೊಂಡದ ಬಳಿಯೇ ನಿಂತಿದ್ದು, ಕುಮಾರ್ ಗೆ ಅನುಮಾನ ಬಂದಿದೆ. ಹೊಂಡಕ್ಕೆ ಇಳಿದು ಪರಿಶೀಲಿಸಿದಾಗ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆಗ ಕುಮಾರ್‌ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ. ಸಿದ್ದಮ್ಮ ಸಹೋದರನ ದೂರಿನ ಅನ್ವಯ ಕುರುಗೋಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.