ಯಳಂದೂರು: ಪಟ್ಟಣದ ಬಳೇಪೇಟೆಯ ಹಳ್ಳದಬೀದಿಯಲ್ಲಿ ಗುರುವಾರ ರಾತ್ರಿ ಅಣ್ಣ, ತಮ್ಮಂದರಿಗೆ ಚಾಕು ಇರಿದು ಗಾಯಗೊಳಿಸಿದ್ದು ಒಬ್ಬ ವ್ಯಕ್ತಿ ಪೊಲೀಸ್ ಠಾಣೆಗೆ ಶರಣಾಗಿದ್ದು ಮತ್ತೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಇಲ್ಲಿನ ಜಿಯಾವುಲ್ಲಾ ಎಂಬುವರ ಮಕ್ಕಳಾದ ಮಹಮ್ಮದ್ ತೌಸಿಫ್ ಹಾಗೂ ಮಹಮ್ಮದ್ ಕಾಶಿಫ್ ಎಂಬುವರೇ ಗಾಯಗೊಂಡ ವ್ಯಕ್ತಿಗಳಾಗಿದ್ದು ಇವರಿಗೆ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಚಾಮರಾಜನಗರದ ಸಿಮ್ಸ್ನಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು ಇವರಿಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ. ಚಾಕುವಿನಿಂದ ಇರಿದಿದ್ದ ಯಳಂದೂರು ಪಟ್ಟಣದ ಸೈಯದ್ ಶಾಹೀದ್ ಎಂಬ ಯುವಕನು ಠಾಣೆಗೆ ಶರಣಾಗಿದ್ದು ಈತನ ಸ್ನೇಹಿತ ಮತ್ತೊಬ್ಬ ಆರೋಪಿ ಚಾಟೀಪುರ ಗ್ರಾಮದ ಕಾಶಿಫ್ ಷರೀಫ್ ನಾಪತ್ತೆಯಾಗಿದ್ದಾನೆ.
ಘಟನೆಗೆ ಕಾರಣ: ಮಹಮ್ಮದ್ ತೌಸಿಫ್ ಎಂಬ ವ್ಯಕ್ತಿ ಪಟ್ಟಣದ ವಾಸಿಯಾಗಿದ್ದು ಇಲ್ಲಿನ ಸನಾವುಲ್ಲಾ ಎಂಬುವರ ಮಗಳು ಹೀನಾ ಬೇಗಂ ಎಂಬುವಳ ಜೊತೆ ವಿವಾಹವಾಗಿತ್ತು. ಹೀನಾ ನಾನು ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿದಾಗ ಈಗ ೯ ತಿಂಗಳ ಮಗಳಿದ್ದು ಬೇಡ ಎಂದು ಗಂಡ ಹೇಳಿದ್ದಾನೆ. ಇದಕ್ಕೆ ಕೋಪಗೊಂಡು ಇವಳು ಮೆನಯಿಂದ ಹೊರಟಿದ್ದಾಳೆ. ನಂತರ ಹೀನಾಳ ತಮ್ಮ ಸೈಯದ್ ಶಾಹೀದ್ ಗುರುವಾರ ರಾತ್ರಿ ತನ್ನ ಸ್ನೇಹಿತ ಕಾಶಿಫ್ ಷರೀಫ್ ಜೊತೆ ಸೇರಿಕೊಂಡು ಮಹಮ್ಮದ್ ತೌಸಿಫ್ಗೆ ಚಾಕುವಿನಿಂದ ಹೊಟ್ಟೆ ನಡುವಿನ ಮದ್ಯ ಭಾಗಕ್ಕೆ ಚುಚ್ಚುತ್ತಿದ್ದ ಆ ವೇಳೆ ಬಿಡಿಸಲು ಬಂದು ತೌಸಿಫ್ನ ತಮ್ಮ ಮಹಮ್ಮದ್ ಕಾಶಿಫ್ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿದ್ದು ಈತನ ಕೈಗೂ ಗಾಯಗೊಳಿಸಿದ್ದಾನೆ ಎಂದು ಗಾಯಾಳು ಮಹಮ್ಮದ್ ತೌಸಿಫ್ ತನ್ನ ಮಾವ ಹಾಗೂ ಹಲ್ಲೆ ಮಾಡಿದ ಇಬ್ಬರು ವ್ಯಕ್ತಿಗಳೂ ಸೇರಿದಂತೆ ಈ ಮೂವರ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ವಹಿಸಿದ್ದಾರೆ.














