ಬೆಂಗಳೂರು: ಬೆಂಗಳೂರಿನಲ್ಲಿ ಯಾವಾಗ ಏನಾಗುತ್ತದೆ ಎಂಬುದು ತಿಳಿಯುವುದು ಕಷ್ಟ. ಅದರಲ್ಲೂ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಇದೀಗ ನಗರದಲ್ಲಿ ಹೈಟೆನ್ಷನ್ ವೈಯರ್ ಸ್ಪರ್ಶಿಸಿ ಬಾಲಕನೊಬ್ಬ ಸಾವಿಗೀಡಾಗಿದ್ದಾನೆ.
ಕೆಆರ್ ಪುರಂನಲ್ಲಿ ನಡೆದ ಘಟನೆ
ಬೆಂಗಳೂರಿನ ಕೆಆರ್ ಪುರಂನಲ್ಲಿ ಈ ಘಟನೆ ನಡೆದಿದ್ದು, 10 ವರ್ಷದ ಅನಂತ್ ಮೃತಪಟ್ಟಿದ್ಧಾನೆ. ಹೈಟೆನ್ಷನ್ ವೈಯರ್ ಮುಟ್ಟಿದ ಕಾರಣದಿಂದ ಬಾಲಕನಿಗೆ ಗಂಭೀರ ಗಾಯವಾಗಿತ್ತು. ಅದರಲ್ಲೂ ದೇಹದ ಶೇ.90 ರಷ್ಟು ಭಾಗ ಸುಟ್ಟುಹೋಗಿತ್ತು. ತಕ್ಷಣವೇ ಬಾಲಕನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ಧಾನೆ.
ನೇಪಾಳ ಮೂಲದ ಬಾಲಕ
ಮಾಹಿತಿಗಳ ಪ್ರಕಾರ ಬಾಲಕ ನೇಪಾಳ ಮೂಲದವನಾಗಿದ್ದು, ಕಳೆದ 5 ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಇನ್ನು ಮಗನ ಸಾವಿನ ವಿಚಾರ ತಿಳಿದ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ. ಆದರೆ ಈ ಸ್ಥಳಕ್ಕೆ ಇನ್ನೂ ಸ್ಥಳೀಯ ಪೊಲೀಸರು ಭೇಟಿ ನೀಡಿಲ್ಲ ಎನ್ನಲಾಗುತ್ತಿದೆ.
ಚಿಕ್ಕಮಕ್ಕಳಿಗೆ ಆಟ ಆಡುವಾಗ ಏನು ಸಿಕ್ಕರೂ ಅದರ ಮೇಲೆ ಕುತೂಹಲ ಮೂಡುತ್ತದೆ ಅದನ್ನ ಮುಟ್ಟಲು ಹೋಗುತ್ತಾರೆ. ಆದರೆ ಹೈಟೆನ್ಷನ್ ವೈಯರ್ಗಳು ಅಷ್ಟು ಸುಲಭವಾಗಿ ಮಕ್ಕಳಿಗೆ ಸಿಗುವುದಿಲ್ಲ. ಈ ರೀತಿ ಮಕ್ಕಳ ಕೈಗೆ ಸಿಗುವ ಹಾಗೆ ಇತ್ತು ಎಂದರೆ ಅದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗಿದ್ದು, ಈ ಬಗ್ಗೆ ತನಿಖೆ ನಡೆದು ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕಿದೆ.














