ಮಂಡ್ಯ : ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸಲಿ ಎಂಬ ಉದ್ದೇಶದಿಂದ ಇ -ಪ್ರೊಕ್ಯೂರ್ ಮೆಂಟ್ ಕುರಿತು ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿಯ ಸದುಪಯೋಗ ಪಡೆದುಕೊಂಡು ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸಿ ಎಂದು ಜಿಲ್ಲಾಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್ ನಂದಿನಿಯವರು ಅಧಿಕಾರಿಗಳಿಗೆ ತಿಳಿಸಿದರು.
ಅವರು ಇಂದು ನಗರದ ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಿ ಗುಂಪಿನ ಸಿಬ್ಬಂದಿ ವರ್ಗದವರಿಗೆ ಮಾಹಿತಿ ಹಕ್ಕು ಅಧಿನಿಯಮ -2005 ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್- 1, ಗ್ರೇಡ್- 2 ಹಾಗೂ ದ್ವಿತೀಯ ದರ್ಜೆಯ ಲೆಕ್ಕ ಸಹಾಯಕರಿಗಾಗಿ ಆಯೋಜಿಸಲಾಗಿದ್ದ ಇ -ಪ್ರೊಕ್ಯೂರ್ ಮೆಂಟ್ ಕುರಿತು ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲಾ, ತಾಲ್ಲೂಕು ಪಂಚಾಯತ್ ಅಧಿಕಾರಿಗಳು ದಕ್ಷತೆಯಿಂದ ಕೆಲಸ ನಿರ್ವಹಿಸದೆಯಿದ್ದಲ್ಲಿ, ಸಭೆಗಳು ಹಾಗೂ ತರಬೇತಿಗಳಿಗೆ ಹಾಜರಾಗದೆಯಿದ್ದಲ್ಲಿ 5 ದಿನದ ಸಂಬಳ ಕಡಿತಗೊಳಿಸಲಾಗುವುದು. ಸಂಬಳ ಕಡಿತಗೊಳಿಸುವ ಸಂಪೂರ್ಣ ಅಧಿಕಾರವನ್ನು ಜಿಲ್ಲಾಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೊಂದಿದ್ದಾರೆ ಎಂದು ಎಚ್ಚರಿಸಿದರು.
ಆ. 15 ರಂದು ಮುಟ್ಟಿನ ಕಪ್ ವಿತರಣಾ ಅಭಿಯಾನ
ಮಹಿಳೆಯರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾದ್ಯಂತ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಆಗಸ್ಟ್ 15 ರಂದು ಮುಟ್ಟಿನ ಕಪ್ ವಿತರಿಸಲು ನಿರ್ಧರಿಸಲಾಗಿದ್ದು, ಜಿಲ್ಲೆಯ ಪ್ರತಿ ಪ್ರೌಢಶಾಲಾ ವಿದ್ಯಾರ್ಥಿನಿಯರ ಮಾಹಿತಿಯನ್ನು ಸಂಗ್ರಹಿಸಿ ಒಂದು ವಾರದೊಳಗೆ ವರದಿ ನೀಡಿ ಎಂದು ಶಿಕ್ಷಣ ಇಲಾಖೆಗೆ ತಿಳಿಸಿದರು.
ಮುಟ್ಟಿನ ಕಪ್ ವಿತರಣಾ ಅಭಿಯಾನವು ಜಿಲ್ಲೆಯಲ್ಲಿಯೇ ಪ್ರಥಮ ಹೆಜ್ಜೆಯಾಗಿದ್ದು, ಅಭಿಯಾನವನ್ನು ಯಶಸ್ವಿಗೊಳಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಕೈಜೋಡಿಸಿ ಸಹಕರಿಸಬೇಕು ಎಂದು ಹೇಳಿದರು.
ಉತ್ತಮ ಗುಣಮಟ್ಟದ ಮುಟ್ಟಿನ ಕಪ್ ಗಳನ್ನು ವಿದ್ಯಾರ್ಥಿನಿಯರಿಗೆ ವಿತರಿಸಿ. ಒಂದು ವೇಳೆ ಅನುದಾನದಲ್ಲಿ ಹಣದ ಕೊರತೆ ಉಂಟಾದಲ್ಲಿ ಪಂಚಾಯಿತಿಗಳು ಸ್ವಂತ ನಿಧಿಯಿಂದ ಉತ್ತಮ ಗುಣಮಟ್ಟದ ಮುಟ್ಟಿನ ಕಪ್ ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸ್ವ-ಸಹಾಯ ಗುಂಪುಗಳೊAದಿಗೆ ಸಭೆ
ಮಹಿಳೆಯರು ಕೌಶಲ್ಯಯುತವಾಗಿ ಅಭಿವೃದ್ಧಿ ಹೊಂದಲು ವಿನೂತನವಾಗಿ ಕೈಗೊಳ್ಳಬಹುದಾದ ಚಟುವಟಿಕೆಗಳನ್ನು ಕುರಿತು ಸ್ವ-ಸಹಾಯ ಗುಂಪುಗಳೊAದಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ನಡೆಸಿ ಮಹಿಳೆಯರು ಆಸಕ್ತಿ ಹೊಂದಿರುವ ಚಟುವಟಿಕೆಗಳ ಕುರಿತು 15 ದಿನದೊಳಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಹೇಳಿದರು.
ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕೆಂಬ ಸದುದ್ದೇಶದಿಂದ ಜಿಲ್ಲೆಯಲ್ಲಿ ವಿವಿಧ ಕೌಶಲ್ಯ ತರಬೇತಿಗಳನ್ನು ಮಹಿಳೆಯರಿಗೆ ಕಲ್ಪಿಸಲು ತೀರ್ಮಾನಿಸಿದ್ದು, ಸ್ವ-ಸಹಾಯ ಗುಂಪುಗಳಿಗೆ ಪಂಚಾಯಿತಿ ವ್ಯಾಪ್ತಿಯ ಸಭೆಯ ಬಗ್ಗೆ ಮಾಹಿತಿ ನೀಡಿ ಹೆಚ್ಚಾಗಿ ಭಾಗವಹಿಸಲು ತಿಳಿಸಿ ಎಂದರು.
ಜಿಲ್ಲೆಯಲ್ಲಿ 86 ಜನ ಜೀತವಿಮುಕ್ತರು
ಜೀತವಿಮುಕ್ತಗೊಂಡ ಕುಟುಂಬದವರಿಗೆ ಪುನರ್ವಸತಿ ಹಾಗೂ ಸರ್ಕಾರದ ಸವಲತ್ತುಗಳನ್ನು ಒದಗಿಸುವ ಸಲುವಾಗಿ ಸರ್ಕಾರದ 13 ದಾಖಲೆಗಳನ್ನು ವಿತರಿಸಲು ನನ್ನ ಗುರುತು ಅಭಿಯಾನವನ್ನು ಜುಲೈನಲ್ಲಿ ಆಯೋಜಿಸಲಾಗುವುದು ಹಾಗೂ ಮುದ್ದೂರಿನಲ್ಲಿ 85, ಮಳವಳ್ಳಿಯಲ್ಲಿ ಒಬ್ಬರು ಜೀತ ಪದ್ಧತಿಯಿಂದ ಮುಕ್ತಾರಾಗಿದ್ದು, ಒಟ್ಟು 86 ವ್ಯಕ್ತಿಗಳು ಜಿಲ್ಲೆಯಲ್ಲಿ ಜೀತವಿಮುಕ್ತಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಧನುಷ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮಿ ಹಾಗೂ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ -1 (ಆಡಳಿತ) ಎಂ. ಬಾಬು ಹಾಜರಿದ್ದರು















