ಮಂಡ್ಯ: ಕರ್ನಾಟಕದ ಅತಿ ಹೆಚ್ಚು ಜನಸಂದಣಿ ಹಾಗೂ ಅಭಿವೃದ್ಧಿ ಹೊಂದಿರುವ ನಗರ ಬೆಂಗಳೂರು. ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣ ನಾಡ ಪ್ರಭು ಕೆಂಪೇಗೌಡರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಹೇಳಿದರು.
ಜೂ.27 ರಂದು ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ 516 ನೇ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿಂದಿನ ಪುಣ್ಯ ಪುರುಷರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಜಯಂತಿಯAತಹ ಕಾರ್ಯಕ್ರಮಗಳನ್ನು ರೂಪಿಸಿ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗುತ್ತಿದೆ ಎಂದರು.
500 ವರ್ಷಗಳ ಹಿಂದೆಯೇ ಕೆಂಪೇಗೌಡರು ದೂರದೃಷ್ಟಿಯನ್ನು ಇಟ್ಟುಕೊಂಡು ಬೆಂಗಳೂರು ನಗರದಲ್ಲಿ ಕೆರೆಕಟ್ಟೆಗಳು, ದೇವಾಲಯಗಳನ್ನು ನಿರ್ಮಿಸಿದ್ದರು. ಪ್ರಸ್ತುತ ಹಳೇ ಮೈಸೂರು ಭಾಗ ಮತ್ತು ಬೆಂಗಳೂರು ಇಷ್ಟು ಅಭಿವೃದ್ಧಿ ಹೊಂದಲು ಮೂಲ ಕಾರಣ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ನಾಡ ಪ್ರಭು ಕೆಂಪೇಗೌಡರು ಎಂದು ಹೇಳಿದರು.
ಕಳೆದ ನೂರು ವರ್ಷಗಳ ಇತಿಹಾಸದಲ್ಲಿ ಕೃಷ್ಣರಾಜ ಅಣೆಕಟ್ಟು ಜೂನ್ ತಿಂಗಳಲ್ಲಿ ಇಷ್ಟು ಪ್ರಮಾಣದ ನೀರು ಶೇಖರಣೆ ಆಗಿಯೇ ಇಲ್ಲ ಇದೊಂದು ಐತಿಹಾಸಿಕ ಕ್ಷಣ. ಕೃಷ್ಣರಾಜ ಅಣೆಕಟ್ಟಿನಿಂದ ಇಂದು ಮಂಡ್ಯ, ಹಳೇ ಮೈಸೂರಿನ ಪ್ರಾಂತ್ಯ, ಬೆಂಗಳೂರಿನAತಹ ನಗರಗಳಲ್ಲಿ ನೀರಿನ ದಾಹವನ್ನು ತಣಿಸಿದೆ ಎಂದು ತಿಳಿಸಿದರು. ಜೂನ್. 30 ರಂದು ಕೆ.ಆರ್.ಎಸ್ ಅಣೆಕಟ್ಟಿಗೆ ಬಾಗಿಣ ಅರ್ಪಣೆ ಮಾಡಲು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅನುಮತಿ ಸೂಚಿಸಿದ್ದಾರೆ. ಜೂನ್ 30 ರಂದು ಜಿಲ್ಲಾ ಎಲ್ಲಾ ಶಾಸಕರು, ಉಪ ಮುಖ್ಯಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಕೆ.ಆರ್.ಎಸ್ ಅಣೆಕಟ್ಟಿಗೆ ಬಾಗಿಣ ಅರ್ಪಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಗಜ್ಯೋತಿ ಬಸವಣ್ಣ, ಕನಕದಾಸರು, ಕೆಂಪೇಗೌಡರAತಹ ನಾಯಕರು ಕೇವಲ ಸಮುದಾಯಗಳಿಗೆ ಸಿಮೀತವಲ್ಲ ಇವೆರೆಲ್ಲ ಜನಪರ ಕೆಲಸ ಮಾಡಿದವರು, ನಾಡಿನ ಅಭಿವೃದ್ಧಿಗೆ ಶ್ರಮಿಸಿದವರು ಎಂದು ಹೇಳಿದರು.
ಮಂಡ್ಯ ಹಳೇ ಮೈಸೂರಿನ ಭಾಗಗಳಲ್ಲಿ ಶೈಕ್ಷಣಿಕ, ಆರೋಗ್ಯ, ಮೀಸಲಾತಿಯ ವಿಚಾರಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಅವರು ನೀಡಿರುವ ಕೊಡುಗೆಗಳನ್ನು ಉಳಿಸಿಕೊಂಡು ಹೋಗಬೇಕಿದೆ, ರೂ 100 ಕೋಟಿ ವೆಚ್ಚದಲ್ಲಿ ಶಿವಳ್ಳಿಯ ಕೃಷಿ ವಿಶ್ವವಿದ್ಯಾಲಯವನ್ನು ಅಭಿವೃದ್ಧಿಪಡಿಸಲಾಗುವುದು, ಮೈ ಶುಗರ್ ಕಾರ್ಖಾನೆಗೆ 25 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಶೀಘ್ರದಲ್ಲಿಯೇ ಹಣ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಅವರು ಮಾತನಾಡಿ ಬೆಂಗಳೂರು ಕಟ್ಟಿದ ನಾಯಕರಾದ ಕೆಂಪೇಗೌಡ ಅವರು 500 ವರ್ಷಗಳ ಹಿಂದೆಯೇ ಬೆಂಗಳೂರು ನಗರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಬೆಂಗಳೂರು ನಿರ್ಮಾಣವಾದ ನಂತರ ಬಹಳಷ್ಟು ಜನರು ಉದ್ಯೋಗವನ್ನು ಪಡೆದು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.
ಕಳೆದ ಎರಡು ವರ್ಷಗಳಿಂದ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರು 4 ಸಾವಿರ ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ, ಮಂಡ್ಯ ಅಭಿವೃದ್ಧಿಗೆ ಸಹಕಾರಿಸುತ್ತಿರುವ ಚೆಲುವರಾಯಸ್ವಾಮಿ ಅವರನ್ನು ಮಂಡ್ಯದ ನಿರ್ಮಾತೃ ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ 33 ಕೋಟಿ ವೆಚ್ಚದಲ್ಲಿ ಹೆದ್ದಾರಿ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ, ಮಂಡ್ಯ ಕೃಷಿ ಆಧಾರಿತ ಜಿಲ್ಲೆಯಾಗಿರುವುದರಿಂದ ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ನೀರು ನೀಡಬೇಕೆಂಬ ಉದ್ದೇಶದಿಂದ ಮಂಡ್ಯ ಕ್ಷೇತ್ರದ ಎಲ್ಲಾ ಕಾಲುವೆಗಳ ಅಗಲೀಕರಣಕ್ಕೆ ರೂ 300 ಕೋಟಿ ಅನುದಾನ ಬಿಡುಗಡೆಗೊಂಡಿದೆ ಶೀಘ್ರವಾಗಿ ಕೆಲಸ ಶುರು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ, ಮಂಡ್ಯ ಜಿಲ್ಲೆಗೆ ಕೃಷಿ ವಿಶ್ವವಿದ್ಯಾಲಯ ತಂದಿದ್ದಾರೆ, ಮುಂದಿನ 3 ವರ್ಷಗಳಲ್ಲಿ ಬೆಂಗಳೂರಿನAತೆ ಮಂಡ್ಯ ವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ನAತರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಶಿಕ್ಷಣ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿಗಳು ಮಾತನಾಡಿ ಕೆಂಪೇಗೌಡರು ಹಂಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಂಪಿಯ ಆಡಳಿತದ ಕಾರ್ಯವೈಖರಿ, ಹಂಪಿಯ ವೈಭವವನ್ನು ಕಂಡು ವಿಜಯನಗರ ಸಂಸ್ಥಾಪಕ ಶ್ರೀಕೃಷ್ಣದೇವರಾಯರ ಬಳಿ ಸಲಹೆ ಪಡೆದು ನಾನು ಇತಂಹ ಒಂದು ನಗರವನ್ನು ಕಟ್ಟಬೇಕೆಂದು ಬೆಂಗಳೂರನ್ನು ಆಯ್ಕೆ ಮಾಡಿಕೊಂಡು ದೇವಾಲಯ, ಕೆರೆಕಟ್ಟೆಗಳನ್ನು ನಿರ್ಮಿಸಿದರು ಎಂದು ಹೇಳಿದರು.
ಅಂದು ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸದೆ ಹೋಗಿದ್ದಾರೆ ಇಂದು ಕರ್ನಾಟಕದ ರಾಜಧಾನಿಯಾಗಿ ಬೆಂಗಳೂರು ಹೊರಹೊಮ್ಮುತ್ತಿರಲಿಲ್ಲ. ಐ.ಟಿ ಬಿ.ಟಿ ಕ್ಷೇತ್ರದಲ್ಲಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರಲಿಲ್ಲ ಎಂದು ಹೇಳಿದರು.
ನಂತರ ಬೆಂಗಳೂರಿನ ವಿವೇಕಾನಂದ ಪದವಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಡಾ. ಬಿ. ಪಾಂಡು ಕುಮಾರ್ ವಿಶೇಷ ಉಪನ್ಯಾಸ ನೀಡಿ ಬೆಂಗಳೂರು ಕೇವಲ ನಮ್ಮ ರಾಜ್ಯದ ರಾಜಧಾನಿ ಅಲ್ಲ ಇಡೀ ವಿಶ್ವದ ಗಮನ ಸೆಳೆಯುತ್ತಿರುವ ಕೇಂದ್ರವಾಗಿದೆ. ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತಿದೆ, ಇದೆಲ್ಲದರ ಕೀರ್ತಿ ನಾಡ ಪ್ರಭು ಕೆಂಪೇಗೌಡ ಅವರಿಗೆ ಸಲ್ಲಬೇಕು ಎಂದರು.
ತದನAತರ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಜಿಲ್ಲೆಯ ಮೊಡಚಾಕನಹಳ್ಳಿಯ ಎಂ.ಆರ್. ನಿಖಿಲ್ ಹಾಗೂ ಹಳೆಬೂದನೂರಿನ ಮನೋಜ್ ಹೆಚ್.ಪಿ ರವರಿಗೆ ಮತ್ತು ಇತರೆ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಮುಡಾ ಅಧ್ಯಕ್ಷ ನಯೀಮ್, ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್, ನಗರಸಭೆ ಉಪಾಧ್ಯಕ್ಷ ಅರುಣ್ ಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರ ಶಿವಲಿಂಗಯ್ಯ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಜಯರಾಮ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಮೆರವಣಿಗೆ
ವರ್ಣರಂಜಿತ ರಥದ ಮೇಲೆ ಇರಿಸಲಾಗಿದ್ದ ನಾಡ ಪ್ರಭು ಕೆಂಪೇಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಜಿಲ್ಲಾಧಿಕಾರಿ ಡಾ ಕುಮಾರ ಹಾಗೂ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಶಿಕ್ಷಣ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿಗಳು ನಗಾರಿ ಬಾರಿಸುವ ಮೂಲಕ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಿದರು.
ಪೂರ್ಣ ಕುಂಭ ಹೊತ್ತ ಮಹಿಳೆಯರು, ಕಹಳೆ, ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಮೈಸೂರು ಬೆಂಗಳೂರು ಹೆದ್ದಾರಿಯ ಮುಖಾಂತರ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ವರೆಗೂ ಮೆರವಣಿಗೆ ತಲುಪಿತು.
ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಮುಖಂಡರಾದ ಅಮ್ಜದ್ ಪಾಷಾ ಸೇರಿದಂತೆ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.














