ಬೆಂಗಳೂರು : ಸಂವಿಧಾನದ ಪೀಠಿಕೆಯಿಂದ ಜಾತ್ಯತೀತ’ ಹಾಗೂ ಸಮಾಜವಾದ’ ಪದಗಳನ್ನು ಕಿತ್ತು ಹಾಕಬೇಕು ಎಂದು ಆರೆಸ್ಸೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮಾಡಿರುವ ವಿವಾದಾತ್ಮಕ ಭಾಷಣವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅಲ್ಲದೇ, ಈ ವಿಚಾರವಾಗಿ ಹೋರಾಟ ನಡೆಸಲು ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರೆಸ್ಸೆಸ್ ಅವರ ಚಿಂತನೆ, ಕುತಂತ್ರ ಏನು ಎಂದು ಹಳ್ಳಿ, ಹಳ್ಳಿಗೂ ತಲುಪಿಸುವ ಕೆಲಸವನ್ನು ಮಾಡಲಾಗುವುದು. ಆರೆಸ್ಸೆಸ್ನ ಈ ಹೇಳಿಕೆಯನ್ನು ಕೇಂದ್ರ ಸರಕಾರದ ಮೈತ್ರಿ ಪಕ್ಷಗಳ ಮುಖಂಡರಾದ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಒಪ್ಪುತ್ತಾರೆಯೇ ಎಂದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಆರೆಸ್ಸೆಸ್ ಎಂದಿಗೂ ಸಂವಿಧಾನವನ್ನು ಒಪ್ಪಿಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೇ ಇರುವಂತಹ ಜನರಿವರು. ಆರೆಸ್ಸೆಸ್ನವರು ಯಾವಾಗಲೂ ಸಂವಿಧಾನ ವಿರೋಧಿಗಳಾಗಿಯೇ ನಡೆದುಕೊಂಡು ಬಂದವರು. ಅವರಿಗೆ ಯಾವಾಗ ಹಿನ್ನಡೆಯಾಗುತ್ತದೆಯೋ ಆಗ ಸಂವಿಧಾನದ ಬಗ್ಗೆ ಇಂತಹ ಮಾತುಗಳನ್ನು ಆಡುವುದನ್ನು ಚಾಳಿ ಮಾಡಿಕೊಂಡಿದ್ದಾರೆ ಎಂದು ಅವರು ಟೀಕಿಸಿದರು. ೧೯೫೨ರಿಂದಲೂ ಇವರು ಜನರನ್ನು ಜಾತಿ, ಧರ್ಮಗಳ ಹೆಸರಿನಲ್ಲಿ ಪ್ರಚೋದಿಸುವ ಕೆಲಸ ಮಾಡುತ್ತಲೇ ಇದ್ದಾರೆ. ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಒಗ್ಗಟ್ಟನ್ನು ಒಡೆಯುವ ಕೆಲಸ ಆರೆಸ್ಸೆಸ್ ಮಾಡುತ್ತಿದೆ. ಇವರಿಗೆ ದೇಶ ಒಗ್ಗಟ್ಟಾಗಿ ಇರಬೇಕೆ ಬೇಡವೇ? ಮತ್ತೆ ಮನುಸ್ಮೃತಿಯನ್ನು ಹೇರುವ ಕೆಲಸ ಮಾಡುವುದೇ ಇವರ ಕಾಯಕವೇ? ಎಂದು ಪ್ರಶ್ನಿಸಬೇಕಿದೆ ಎಂದು ರೇವಣ್ಣ ಹೇಳಿದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ತುರ್ತು ಪರಿಸ್ಥಿತಿ ಘೋಷಣೆಯಾಗಿ ೫೦ ವರ್ಷ ತುಂಬಿರುವ ಈ ಹೊತ್ತಿನಲ್ಲಿ ಇದರ ಬಗ್ಗೆ ಬಿಜೆಪಿಯವರು ಹೆಚ್ಚು ಮಾತನಾಡುತ್ತಾರೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಎದುರಾಗಿದೆ. ಇದನ್ನು ಮುಚ್ಚಿಟ್ಟುಕೊಳ್ಳಲು ನಮ್ಮ ಮೇಲೆ ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಸಂವಿಧಾನದ ಕಲಂ ೩೫೨ ಪ್ರಕಾರ ಅಂದು ಸಂವಿಧಾನಾತ್ಮಕವಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಯಿತು. ನಾನು ಸಹ ೧೭ ತಿಂಗಳ ಕಾಲ ಜೈಲಿನಲ್ಲಿದ್ದೆ. ಅಂದು ರಾಜಕೀಯ ನಾಯಕರನ್ನು ಜೈಲಿಗೆ ಹಾಕಲಾಗುತ್ತಿತ್ತು. ಇಂದು ಈ.ಡಿ, ಸಿಬಿಐ, ಐಟಿ ಸೇರಿದಂತೆ ಇತರೇ ಇಲಾಖೆಗಳನ್ನು ಬಳಸಿಕೊಂಡು ರಾಜಕೀಯ ನಾಯಕರನ್ನು ಬೆದರಿಸಲಾಗುತ್ತಿದೆ ಎಂದು ಅವರು ದೂರಿದರು.
೭೦೦ ರೂಪಾಯಿ ಇದ್ದ ತಲಾದಾಯವನ್ನು ೧.೫೦ ಲಕ್ಷ ರೂ.ಗಳಿಗೆ ಏರಲು ಕಾಂಗ್ರೆಸ್ ಸರಕಾರದ ಯೋಜನೆಗಳು ಕಾರಣ. ಮೋದಿಯವರು ೧೩೨ ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಈ ಹಣವನ್ನು ಎಲ್ಲಿ ಹೂಡಿಕೆ ಮಾಡಿದ್ದಾರೆ. ಯಾರ ಬಡತನ, ನಿರುದ್ಯೋಗ ದೂರವಾಗಿದೆ ಎಂದು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಉಗ್ರಪ್ಪ ಆಗ್ರಹಿಸಿದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ಕಾಂಗ್ರೆಸ್ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ. ತುರ್ತುಪರಿಸ್ಥಿತಿ ಘೋಷಣೆ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರೇ ಈ ಹಿಂದೆ ವಿಷಾದ ವ್ಯಕ್ತಪಡಿಸಿದ್ದಾರೆ. ದತ್ತಾತ್ರೇಯ ಹೊಸಬಾಳೆ ಆರೆಸ್ಸೆಸ್ ನ ಸರಸಂಘಚಾಲಕರು ಆಗುವ ಪ್ರಯತ್ನದಲ್ಲಿದ್ದಾರೆ. ದೇಶವ್ಯಾಪಿ ಅವರ ಹೆಸರು ಮುನ್ನೆಲೆಗೆ ಬರಬೇಕು ಎಂದು ಈ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಅವರು ಟೀಕಿಸಿದರು.
ಆರೆಸ್ಸೆಸ್ಗೂ ಸ್ವಾತಂತ್ರ್ಯ ಹೋರಾಟಕ್ಕೂ ಸಂಬಂಧವಿಲ್ಲ. ಸಂವಿಧಾನ ಬರೆಯುವುದರಲ್ಲಿಯೂ ನಿಮ್ಮ ಪಾತ್ರವಿಲ್ಲ. ನಿಮ್ಮದು ಬರೀ ಬೂಟಾಟಿಕೆ ರಾಜಕಾರಣ. ಗೋಳ್ವಾಲ್ಕರ್ ಬರೆದಿರುವ ಬಂಚ್ ಆಫ್ ಥಾಟ್ಸ್ ನ ರೀತಿ ನೀವು ಕೆಲಸ ಮಾಡುವವರು. ಈ ದೇಶದ ಬಗ್ಗೆ ಕಿಂಚಿತ್ತೂ ಯೋಚನೆ ಮಾಡಿದವರಲ್ಲ ನೀವು ಎಂದು ಉಗ್ರಪ್ಪ ವಾಗ್ದಾಳಿ ನಡೆಸಿದರು.
ಮೋದಿಯವರೇ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ. ೧೯೭೭ರಲ್ಲಿ ಜನತಾ ಪರಿವಾರದ ಸರಕಾರ, ಆನಂತರ ವಾಜಪೇಯಿ ಸರಕಾರ, ಕಳೆದ ೧೧ ವರ್ಷಗಳಿಂದ ಮೋದಿ ಅಧಿಕಾರದಲ್ಲಿದ್ದಾರೆ. ಈವರೆಗೆ ಯಾಕೆ ಈ ವಿಷಯದ ಬಗ್ಗೆ ತುಟಿ ಬಿಚ್ಚಿರಲಿಲ್ಲ? ಎಂದು ಪ್ರಶ್ನಿಸಿದ ಅವರು, ಸಂವಿಧಾನ ವಿರೋಧಿ ಹೇಳಿಕೆ ನೀಡುವ ಮೂಲಕ ಹೊಸಬಾಳೆ ಸಂಸತ್ತಿಗೆ ಅಪಚಾರ ಮಾಡಿದ್ದಾರೆ. ಲೋಕಸಭೆ ಸ್ಪೀಕರ್ ಇವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಹೇಳಿದರು. ವಿಧಾನಪರಿಷತ್ ಮಾಜಿ ಸದಸ್ಯ ಪ್ರಕಾಶ್ ರಾಥೋಡ್ ಮಾತನಾಡಿ, ಸಂವಿಧಾನವನ್ನು ಎಂದಿಗೂ ಒಪ್ಪಿಕೊಳ್ಳದ ಆರೆಸ್ಸೆಸ್, ತನ್ನ ಕಚೇರಿಯಲ್ಲಿ ೫೨ ವರ್ಷ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ. ಸಂವಿಧಾನ ಬದಲಾವಣೆ ಮಾಡಬೇಕು ಎಂದೇ ಅಧಿಕಾರಕ್ಕೆ ಬಂದವರ ರೀತಿ ಇವರು ವರ್ತಿಸುತ್ತಿದ್ದಾರೆ. ದೇಶದ ಮಹಾನ್ ನಾಯಕರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುವುದು ಅವರ ಪ್ರವೃತ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.














