ಬೆಂಗಳೂರು (Bengaluru): ಪರಿಷ್ಕೃತ ಪಠ್ಯಕ್ಕೆ ಆಕ್ಷೇಪಗಳಿದ್ದರೆ ಅದನ್ನು ನಿವಾರಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವು ಪ್ರತಿಷ್ಠೆಗೆ ಬಿದ್ದಿಲ್ಲ. ಪಠ್ಯದಲ್ಲಿ ಏನೆಲ್ಲಾ ಬದಲಾವಣೆ ಮಾಡಬೇಕೋ ಅದನ್ನು ಮುಕ್ತ ಮನಸ್ಸಿನಿಂದ ಮಾಡಲಾಗುವುದು ಎಂದು ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ದೇಶ ಹಾಗೂ ರಾಜ್ಯ ಕಟ್ಟಲು ಶ್ರಮಿಸಿರುವ ಹಿರಿಯರು, ರಾಜಮಹಾರಾಜರು, ಸಾಹಿತಿಗಳು, ಕಲಾಕಾರರು, ಜ್ಞಾನಪೀಠ ಪುರಸ್ಕೃತ ಬಗ್ಗೆ ಅಪಾರ ಗೌರವ ಇದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಸ್ವಾಮೀಜಿಗಳು ಸಲ್ಲಿಸಿರುವ ಮನವಿ ಪರಿಶೀಲಿಸಿ ಬದಲಾವಣೆಗಳನ್ನು ಮುಕ್ತ ಮನಸ್ಸಿನಿಂದ ಮಾಡುತ್ತೇವೆ ಎಂದರು.
ನಾಡಿನ ಮಹನೀಯರ ಗೌರವ ಉಳಿಸಲು ಹಾಗೂ ಮುಂದಿನ ಜನಾಂಗಕ್ಕೆ ಮಹನೀಯರ ಇತಿಹಾಸ ತಿಳಿಸಲು ಯಾವುದೇ ಮಟ್ಟಕ್ಕೂ ಹೋಗಲು ತಯಾರಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನ ರಾಜ್ಯ ಪ್ರವಾಸ ನಡೆಸಲಿದ್ದು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.