ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 5 ಹುಲಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧನ ಮಾಡಲಾಗಿತ್ತು. ಈಗ ಅದಕ್ಕೆ ಸಂಬಂಧಿಸಿದಂತೆ ಅರಣ್ಯ ಅಧಿಕಾರಿಗಳನ್ನ ಸಹ ಸಸ್ಪೆಂಡ್ ಮಾಡಲಾಗಿದೆ.
3 ಅಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿದ ಸರ್ಕಾರ: ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ವನ್ಯಜೀವಿ ವಿಭಾಗದ ಡಿಸಿಎಫ್ ವೈ ಚಕ್ರಪಾಣಿ ಹಾಗೂ ಹನೂರು ವನ್ಯಜೀವಿ ಉಪ ವಿಭಾಗದ ಎಸಿಎಫ್ ಗಜಾನನ ಹೆಗಡೆ ಮತ್ತು ಉಪ ವಲಯದ ಅರಣ್ಯಾಧಿಕಾರಿ ಮಾದೇಶ್ ಅವರನ್ನ ಸಸ್ಪೆಂಡ್ ಮಾಡಲಾಗಿದೆ.
ಹುಲಿ ಹಾಗೂ ಅದರ 4 ಮರಿಗಳು ರಸ್ತೆಯಿಂದ ಕೇವಲ 100 ಮೀಟರ್ ಅಂತರದಲ್ಲಿ ಸತ್ತು ಬಿದ್ದಿದ್ದರೂ ಸಹ ಅಧಿಕಾರಿಗಳ ಗಮನಕ್ಕೆ ಬರದಿರುವುದು ಹಾಗೂ ಕೇವಲ 800 ಮೀಟರ್ ದೂರದಲ್ಲಿ ಕಳ್ಳಬೇಟೆ ಶಿಬಿರ ಇದ್ದರೂ ಸಹ ಹುಲಿಗಳ ರಕ್ಷಣೆ ಮಾಡಲಾಗಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಇನ್ನು ಈ ಪ್ರಕರಣದ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಆಗಬೇಕಿದ್ದು, ಸದ್ಯಕ್ಕೆ ಸಿಬ್ಬಂದಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಹುಲಿಗೆ ವಿಷ ಹಾಕಿದ್ದ ಆರೋಪಿಗಳು ವಶಕ್ಕೆ: ಹುಲಿ ಹಸುವನ್ನ ಕೊಂದು ಹಾಕಿರುವ ಕಾರಣದಿಂದ ಕೋನಪ್ಪ ಎನ್ನುವ ವ್ಯಕ್ತಿಗೆ ಕೋಪ ಬಂದಿದ್ದು, ಆತನ ಮಾತನ್ನ ಕೇಳಿಕೊಂಡು ಮಾದುರಾಜು, ನಾಗರಾಜು ಎಂಬುವರು ಕೀಟನಾಶಕವನ್ನು ಹಸುವಿನ ದೇಹಕ್ಕೆ ಸಿಂಪಡಿಸಿ, ಹುಲಿ ಹಾಗೂ ಮರಿಗಳನ್ನ ಕೊಲೆ ಮಾಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 9.27ರ ಮತ್ತು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 24ರ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲಾಗಿದ್ದುಮ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ.














