ಬೆಂಗಳೂರು: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-೨೦೨೫ರ ಸಂಬಂಧ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪ ಎಸಗಿರುವ ಆರೋಪದಡಿ ಮೂರು ಜನ ಬಿಬಿಎಂಪಿ ನೌಕರರನ್ನು ಅಮಾನತುಗೊಳಿಸಲಾಗಿದೆ.
ಹೆಚ್.ಬಿ.ಆರ್ ಲೇಔಟ್ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಪರಿವೀಕ್ಷಕರಾದ ರಮೇಶ್, ಕಂದಾಯ ವಸೂಲಿಗಾರರಾದ ಪೆದ್ದುರಾಜು ಹಾಗೂ ಕೆಂಗೇರಿ ಉಪ ವಿಭಾಗ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ವಸೂಲಿಗಾರರಾದ ಸಿ. ಸಂದಿಲ್ ಕುಮಾರ್ ಅವರನ್ನು ಕರ್ತವ್ಯಲೋಪದ ಮೇರೆಗೆ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಸರ್ವೆ ಸಮೀಕ್ಷೆ ಕಾರ್ಯಕ್ಕೆ ವಾರ್ಡಿನ ಮೇಲ್ವಿಚಾರಕರಾಗಿ ನಿಯೋಜಿಸಲಾಗಿದ್ದು, ಮನೆ ಮನೆಗೆ ಸ್ಟಿಕರ್ ಅಂಟಿಸುವ ಕಾರ್ಯದಲ್ಲಿ ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣತಿದಾರರು ಮನೆಯ ನಿವಾಸಿಗಳನ್ನು ಸಂಪರ್ಕಿಸಿ ಸರ್ವೆ ಆಗಿರುವ ಬಗ್ಗೆ ಖಾತ್ರಿ ಪಡಿಸಿಕೊಂಡ ನಂತರ ಮನೆಗೆ ಸ್ಟಿಕರ್ ಅಂಟಿಸಿ, ಮೊಬೈಲ್ ಆಪ್ ಮೂಲಕ ಅಪ್ ಲೋಡ್ ಮಾಡಬೇಕಾಗಿರುತ್ತದೆ. ಈ ಬಗ್ಗೆ ತಾವು ಖುದ್ದು ಪರಿಶೀಲನೆ ನಡೆಸಬೇಕಾಗಿದೆ.
ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ತೊಡಗಿರುವ ಗಣತಿದಾರರು / ಸಿಬ್ಬಂದಿಗಳು ಸಂಬಂಧಪಟ್ಟ ಮನೆಗಳ ಮಾಲೀಕರು / ನಿವಾಸಿಗಳನ್ನು ಸಂಪರ್ಕಿಸದೆ ಬೇಕಾಬಿಟ್ಟಿಯಾಗಿ ಸ್ಟಿಕ್ಕರ್ ಅಂಟಿಸುತ್ತಿರುವ ಹಾಗೂ ಆಸಡ್ಡೆ ಮನೋಭಾವ ಕಂಡುಬಂದಿದೆ. ತಮಗೆ ವಹಿಸಿರುವ ಕೆಲಸದಲ್ಲಿ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಹಾಗೂ ಮೇಲಾಧಿಕಾರಿಗಳ ಆದೇಶವನ್ನು ಪಾಲಿಸದೇ ಮೇಲ್ವಿಚಾರಕರ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸದೇ, ಕರ್ತವ್ಯಲೋಪವೆಸಗಿರುವ ಹಿನ್ನೆಲೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತ್ತುಪಡಿಸಿ ಆದೇಶಿಸಲಾಗಿದೆ.














