ಮನೆ ರಾಜ್ಯ ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಬೆಂಗಳೂರು, ಮೈಸೂರಿನಲ್ಲಿ ಭಾರೀ ಭದ್ರತೆ: ರೋಡ್‌ ಶೋಗೆ ಅನುಮತಿ ನಿರಾಕರಣೆ

ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಬೆಂಗಳೂರು, ಮೈಸೂರಿನಲ್ಲಿ ಭಾರೀ ಭದ್ರತೆ: ರೋಡ್‌ ಶೋಗೆ ಅನುಮತಿ ನಿರಾಕರಣೆ

0

ಬೆಂಗಳೂರು (Bengaluru): ಪ್ರಧಾನಿ ನರೇಂದ್ರ ಮೋದಿ(PM Narendra Modi) ಎರಡು ದಿನಗಳ ಭೇಟಿಗೆ ಕರ್ನಾಟಕಕ್ಕೆ ಆಗಮಿಸುತ್ತಿದ್ದು ಬೆಂಗಳೂರು ಹಾಗೂ ಮೈಸೂರು ಅವರ ಪ್ರವಾಸ ಕಾರ್ಯಕ್ರಮದಲ್ಲಿ ನಿಗದಿಯಾಗಿವೆ.

ಹೀಗಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಪ್ರಧಾನಿಯವರ ಕಾರ್ಯಕ್ರಮಗಳು ನಡೆಯುವ ಸ್ಥಳಗಳು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ.

ದೆಹಲಿಯಿಂದ ಇಂದು ಬೆಳಿಗ್ಗೆ 11.55ಕ್ಕೆ ಯಲಹಂಕ ವಾಯು ನೆಲೆಗೆ ಬಂದಿಳಿಯುವ ಪ್ರಧಾನ ಮಂತ್ರಿಗಳು, ಮಲ್ಲೇಶ್ವರದ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್‌ ಹಾಗೂ ಕೆಂಗೇರಿ ಸಮೀಪದ ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ್‌’ ವಿರೋಧಿಸಿ ಕೆಲ ಸಂಘಟನೆಗಳು ‘ಭಾರತ್‌ ಬಂದ್‌’ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಕಾರ್ಯಕ್ರಮಗಳಿಗೆ ಮತ್ತು ಅವರು ಸಂಚರಿಸುವ ಪ್ರದೇಶಗಳಿಗೆ ಮುಂಜಾಗ್ರತಾ ಕ್ರಮವಾಗಿ ಸುಮಾರು 10 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ನಗರದ ಪೊಲೀಸರ ಜತೆಗೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಹೆಚ್ಚುವರಿ ಸಿಬ್ಬಂದಿಯನ್ನೂ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಪ್ರಧಾನಿ ಕಾರ್ಯಕ್ರಮಗಳು ಆಯೋಜನೆಯಾಗಿರುವ ಸ್ಥಳಗಳಿಗೆ ಎಸ್‌ಪಿಜಿ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಿದ್ದಾರೆ.

ರೋಡ್‌ ಶೋಗೆ ಅನುಮತಿ ನಿರಾಕರಣೆ

ಮುಂಬರುವ ಬಿಬಿಎಂಪಿ ಮತ್ತು ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕವು ಬೆಂಗಳೂರಿನ ವಿವಿಧೆಡೆ ನಡೆಸಲು ಉದ್ದೇಶಿಸಿದ್ದ ಮೋದಿ ರೋಡ್‌ ಶೋಗೆ ಪ್ರಧಾನಿ ಭದ್ರತೆಯ ಹೊಣೆ ಹೊತ್ತಿರುವ ಎಸ್‌ಪಿಜಿ ಅನುಮತಿ ನಿರಾಕರಿಸಿದೆ.

ಪಕ್ಷದ ರೋಡ್‌ ಶೋ ಪ್ರಸ್ತಾವದ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದ ಎಸ್‌ಪಿಜಿ ಅಧಿಕಾರಿಗಳು, ಭದ್ರತೆ ಕಾರಣಕ್ಕೆ ಅಂತಿಮ ಕ್ಷಣದಲ್ಲಿ ರೋಡ್‌ ಶೋಗೆ ಅವಕಾಶ ನೀಡಿಲ್ಲ. ಮೋದಿ ಅವರನ್ನು ರಸ್ತೆ ಮಾರ್ಗದ ಬದಲಿಗೆ ವಿವಿಧೆಡೆ ವಾಯು ಮಾರ್ಗದಲ್ಲಿ (ಹೆಲಿಕಾಪ್ಟರ್‌ನಲ್ಲಿ) ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ. ಕೊಮ್ಮಘಟ್ಟದಿಂದ ಜ್ಞಾನಭಾರತಿ ಆವರಣಕ್ಕೆ ಮಾತ್ರ ರಸ್ತೆ ಮಾರ್ಗದಲ್ಲಿ ಸಂಚರಿಸಲಿದ್ದಾರೆ.

ಮೋದಿ ಅವರು, ಮೊದಲಿಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಆವರಣದಲ್ಲಿ ಬ್ರೈನ್‌ ರಿಸರ್ಚ್ ಆ್ಯಂಡ್‌ ಸೂಪರ್‌ ಕಂಪ್ಯೂಟಿಂಗ್‌ ವೈದ್ಯಕೀಯ ಸೇವೆಗೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ತಾತ್ಕಾಲಿಕವಾಗಿ ಹೆಲಿಪ್ಯಾಡ್‌ ನಿರ್ಮಿಸಲಾಗಿದೆ. ಐಐಎಸ್‌ಸಿ ಕಾರ್ಯಕ್ರಮದ ಬಳಿಕ ಮೋದಿ ಕೊಮ್ಮಘಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕೊಮ್ಮಘಟ್ಟ ಸಮೀಪ ಕೆಂಗೇರಿ ಉಪನಗರದ ಸ್ಯಾಟಲೈಟ್‌ ಕ್ಲಬ್‌ನಲ್ಲಿ3 ಹೆಲಿಪ್ಯಾಡ್‌ ನಿರ್ಮಿಸಲಾಗಿದೆ. ಕೊಮ್ಮಘಟ್ಟದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರೂ ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಕಾರ್ಯಕ್ರಮಕ್ಕೆ ಬರುವ ಪ್ರತಿ ವ್ಯಕ್ತಿಯನ್ನೂ ಹಲವು ಹಂತದಲ್ಲಿ ತಪಾಸಣೆಗೆ ಒಳಪಡಿಸಿ ಪ್ರವೇಶ ನೀಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದ ಆಯೋಜಿಸಿರುವ ಪ್ರದೇಶದ ಪ್ರವೇಶ ಭಾಗದಲ್ಲೇ ಲೋಹಶೋಧಕ ಉಪಕರಣಗಳನ್ನು ಅಳವಡಿಸಲಾಗಿದೆ. ಮೋದಿ ಅವರು ಕೊಮ್ಮಘಟ್ಟದಿಂದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ನಡೆಯುವ ಡಾ.ಬಿ.ಆರ್‌ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಯೂನಿವರ್ಸಿಟಿ (ಬೇಸ್‌) ಕ್ಯಾಂಪಸ್‌ ಉದ್ಘಾಟನೆ ಮತ್ತು ಅಂಬೇಡ್ಕರ್‌ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ರಸ್ತೆ ಮಾರ್ಗವಾಗಿ ಆಗಮಿಸಲಿದ್ದಾರೆ. ಬೆಂಗಳೂರಿನ ಕಾರ್ಯಕ್ರಮಗಳೆಲ್ಲ ಪೂರ್ಣಗೊಂಡ ಬಳಿಕ ಹೆಲಿಕಾಪ್ಟರ್‌ನಲ್ಲಿ ಸಂಜೆ ಮೈಸೂರಿಗೆ ಪ್ರಯಾಣ ಬೆಳೆಸುತ್ತಾರೆ.