ಶಿವಮೊಗ್ಗ: ರಾಜ್ಯ ಬಿಜೆಪಿಯಲ್ಲಿ ಅತೃಪ್ತರ ಸಂಖ್ಯೆ ಜಾಸ್ತಿ ಆಗಿದೆ. ಅದರಲ್ಲೂ ರಾಜ್ಯಾಧ್ಯಕ್ಷ ಬದಲಾವಣೆ ಕೂಗು ಕೇಳಿ ಬಂದಿದೆ. ಈ ವಿಚಾರವಾಗಿ ಅನೇಕ ನಾಯಕರು ವಿವಿಧ ರೀತಿಯ ಹೇಳಿಕೆಗಳನ್ನ ನೀಡುತ್ತಿದ್ದು, ಈ ವಿಚಾರವಾಗಿ ಇಂದು ಪರಿಷತ್ ಸದಸ್ಯ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಪಕ್ಷದಲ್ಲಿ ಹೋರಾಟ ಇಲ್ಲ: ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರು ಯಾರಾಗಬೇಕು ಎಂಬ ಪ್ರಶ್ನೆಗೆ ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಹೋರಾಟ ನಡೆಯುತ್ತಿಲ್ಲ. ಸ್ಥಳೀಯ ಮಟ್ಟದಲ್ಲಿ ಫೀಡ್ ಬ್ಯಾಕ್ ಪಡೆದುಕೊಂಡು ಹೈಕಮಾಂಡ್ ರಾಜ್ಯಾಧ್ಯಕ್ಷರನ್ನ ಆಯ್ಕೆ ಮಾಡುತ್ತದೆ. ಸಂದರ್ಭಕ್ಕೆ ತಕ್ಕಂತೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಇನ್ನು ಈ ರಾಜ್ಯಾಧ್ಯಕ್ಷ ಹುದ್ದೆ ಒಂದು ಅಧಿಕಾರವಲ್ಲ ಅದು ಜವಾಬ್ದಾರಿ ಎಂದಿದ್ದಾರೆ.
ಹೈಕಮಾಂಡ್ ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿ ನಿರ್ಧಾರ ಮಾಡುತ್ತದೆ. ಯಾರನ್ನ ಆಯ್ಕೆ ಮಾಡಿದರೆ ಪಕ್ಷವನ್ನ ಸಂಘಟಿಸಲು ಸಹಾಯವಾಗುತ್ತೆ ಎಂಬುದನ್ನ ನೋಡಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಅತೃಪ್ತರ ಸಭೆ ಬಗ್ಗೆ ಮಾಹಿತಿ ಇಲ್ಲ: ಇನ್ನು ಅತೃಪ್ತರು ಒಂದೆಡೆ ಸೇರಿ ಸಭೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಆ ರೀತಿ ಯಾವುದೇ ಸಭೆಯ ಬಗ್ಗೆ ಗೊತ್ತಿಲ್ಲ. ಅವರು ಯಾವ ರೀತಿಯಾಗಿ ಅತೃಪ್ತರು ಎಂಬುದು ನನಗೆ ಅರ್ಥವಾಗಿಲ್ಲ. ನಾವು ಸೈಧಾಂತಿಕವಾಗಿ ಬಿಜೆಪಿ ಪಕ್ಷದವರು. ನಾವಂತೂ ಸೈಧಾಂತಿಕವಾಗಿ ತೃಪ್ತರು. ಎಂದೆಂದಿಗೂ ಬಿಜೆಪಿಯವರು ಎಂದು ಹೇಳಿದ್ದಾರೆ. ಈ ಮೂಲಕ ತಾನು ಯಾವುದೇ ಅತೃಪ್ತ ಬಣಕ್ಕೆ ಸೇರಿಲ್ಲ ಎಂಬುದನ್ನ ಸಿಟಿ ರವಿ ಸ್ಪಷ್ಟಪಡಿಸಿದ್ದಾರೆ ಎನ್ನಬಹುದು.














