ಬೆಂಗಳೂರು : ಉಪಲೋಕಾಯುಕ್ತರಿಗೆ ಸೈಬರ್ ವಂಚಕರು ವಂಚಿಸಲು ಯತ್ನಿಸಿರುವ ಘಟನೆ ಸಂಬಂಧ ಇಲ್ಲಿನ ಕೇಂದ್ರ
ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜುಲೈ ೯ ರಂದು ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರಿಗೆ ಕರೆ ಮಾಡಿದ್ದ ಅಪರಿಚಿತರು ಬೆದರಿಸಲು ಯತ್ನಿಸಿರುವ
ಬಗ್ಗೆ ದೂರು ನೀಡಿದ ಹಿನ್ನೆಲೆ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರಿಗೆ ಕರೆ ಮಾಡಿದ್ದ ಅಪರಿಚಿತರು, ಹಿರಿಯ ಕಾನೂನು ಸಲಹೆಗಾರ ದೀಪಕ್
ಕುಮಾರ್ ಶರ್ಮಾ ಹಾಗೂ ಕಿರಿಯ ಕಾನೂನು ಸಲಹೆಗಾರ ರಾಹುಲ್ ಕುಮಾರ್ ಶರ್ಮಾ ಎಂದು
ಪರಿಚಯಿಸಿಕೊಂಡಿದ್ದರು. ಮುಂಬೈನಲ್ಲಿರುವ ಭಾರತೀಯ ದತ್ತಾಂಶ ಸಂರಕ್ಷಣಾ ಮಂಡಳಿಯಿಂದ ಕರೆ ಮಾಡುತ್ತಿದ್ದು,
‘ನಿಮ್ಮ ಆಧಾರ್ಗೆ ಲಿಂಕ್ ಆಗಿರುವ ಫೋನ್ ನಂಬರ್ನಿಂದ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ’
ಎಂದಿದ್ದಾರೆ.
ಅದಕ್ಕೆ ‘ನೋಟಿಸ್ ಕಳುಹಿಸಿ ಕೊಡಿ’ ಎಂದು ತಾವು ಸೂಚಿಸಿದ್ದು, ಕರೆಯ ಕುರಿತು ಅನುಮಾನವಿದೆ ಎಂದು ಕೆ.ಎನ್.ಫಣೀಂದ್ರ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಕೇಂದ್ರ ವಿಭಾಗದ ಸಿಇಎನ್ ಠಾಣೆ ಪೊಲೀಸರು, ತನಿಖೆ
ಕೈಗೊಂಡಿರುವುದಾಗಿ ವಿವರಿಸಿದ್ದಾರೆ.














