ಮನೆ ಸ್ಥಳೀಯ ಮಡಿವಾಳ ಸಮುದಾಯದ ಅಭಿವೃದ್ಧಿಗೆ ಸಂಘಟನೆ ಅಗತ್ಯ

ಮಡಿವಾಳ ಸಮುದಾಯದ ಅಭಿವೃದ್ಧಿಗೆ ಸಂಘಟನೆ ಅಗತ್ಯ

0

ಶ್ರೀಬಸವ ಮಾಚಿದೇವ ಸ್ವಾಮೀಜಿ ಸಲಹೆ, ‘ಮನ ಮನೆಗೆ ಮಾಚಿದೇವ’ ಆಹ್ವಾನ ಪತ್ರಿಕೆ ಬಿಡುಗಡೆ

ಮೈಸೂರು : ಸಮಾಜ ಮತ್ತು ಸಮುದಾಯದ ಒಳಿತಿಗಾಗಿ ಮಾಚಿದೇವರು ನಮಗೆ ಏನು ಆದೇಶ ಮಾಡುತ್ತಾರೋ ಅಂತಹ ಕಾರ್ಯವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ. ಸಮುದಾಯದವರು ಸಂಘಟಿತರಾದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.

ನಗರದ ಕುದೇರು ಮಠದಲ್ಲಿ ಏರ್ಪಡಿಸಿದ್ದ ಶ್ರಾವಣ ಮಸದ ವಿಶೇಷ ಕಾರ್ಯಕ್ರಮ ರಾಜ್ಯಮಟ್ಟದ ‘ಮನ ಮನೆಗೆ ಮಾಚಿದೇವ’ ೩೦ ದಿನಗಳ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಜುಲೈ ೨೭ ರಂದು ಭಾನುವಾರ ರಾಮನಗರದ ಮಾಗಡಿಯಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ನಂತರ ಬೀದರ್, ಕಲಬುರಗಿ, ಯಾದಗಿರಿ ಸೇರಿದಂತೆ ಇಡೀ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಾರ್ಯಕ್ರಮ ನಡೆಯುತ್ತದೆ. ಆಗಸ್ಟ್ ೨೭ ರಂದು ತುಮಕೂರಿನಲ್ಲಿ ಸಮಾರೋಪ ಏರ್ಪಡಿಸಲಾಗಿದೆ ಎಂದರು.

ಇದೇ ರೀತಿ ಆಗಸ್ಟ್ ೧೩ ರಂದು ಮೈಸೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಯಾವುದೇ ಆಡಂಬರ ಇರಬಾರದು, ಹಾರ, ತುರಾಯಿ, ಶಾಮಿಯಾನ, ಊಟೋಪಚಾರ ಬೇಡ, ಕಡಿಮೆ ಖರ್ಚಿನಲ್ಲಿ ಸಮಾರಂಭ ನಡೆಸಿ ನಾವು ಮಾದರಿಯಾಗೋಣ, ಉಳಿದಂತೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸಾಧಕರನ್ನು, ಕ್ಷೇತ್ರದ ಜನಪ್ರತಿನಿಧಿಗಳನ್ನು ಗೌರವಿಸಿ ಕೇವಲ ಕಡಲೆಪುರಿ ಸಕ್ಕರೆ ಹಂಚಿ ಕಾರ್ಯಕ್ರಮವನ್ನು ಮುಗಿಸಬೇಕು. ನಮ್ಮ ಉದ್ದೇಶ ಮನ ಮನೆಗೆ ಮಾಚಿದೇವರ ಸಂದೇಶ ಹರಡಬೇಕು, ಆಮೂಲಕ ಸಮುದಾಯದ ಬಂಧುಗಳು ಸಂಘಟಿತರಾಗಬೇಕು ಎಂದು ಶ್ರೀಗಳು ಸಲಹೆ ನೀಡಿದರು. ಮೈಸೂರು ಜಿಲ್ಲೆಯಲ್ಲಿ ತಾಲ್ಲೂಕಿಗೆ ಒಬ್ಬರಂತೆ ಶ್ರೀಮಠಕ್ಕೆ ಸದಸ್ಯರನ್ನಾಗಿ ಮಾಡಿಕೊಳ್ಳುತ್ತೇವೆ.ಇದರ ಅವಧಿ ಒಂದು ವರ್ಷ ಇರುತ್ತದೆ, ನಂತರ ಬೇರೆಯರಿಗೆ ಅವಕಾಶ ನೀಡಲಾಗುವುದು. ಸೇವಾಮನೋಭಾವ ಇರುವ ವ್ಯಕ್ತಿಗಳನ್ನು ನೀವೇ ಆಯ್ಕೆ ಮಾಡಿ ಕಳಿಸಿ ಎಂದರು.


ಕಾಯಕ ಜನೋತ್ಸವ-೨೦೨೬:
ಮುಂದಿನ ವರ್ಷ ಜನವರಿ ೫ ಮತ್ತು ೬ ರಂದು ಶ್ರೀಮಠದಲ್ಲಿ ಶ್ರೀಮಠದ ಶಂಕುಸ್ಥಾಪನೆಯ ೧೭ನೇ ವಾರ್ಷಿಕೋತ್ಸವ, ಸ್ವಾಮೀಜಿಗಳ ಜಂಗಮ ದೀಕ್ಷೆಯ ೨೭ನೇ ಹಾಗೂ ೪೨ನೇ ಜನ್ಮದಿನದ ವಾರ್ಷಿಕೋತ್ಸವದ ಪ್ರಯುಕ್ತ ಕಾಯಕ ಜನೋತ್ಸವ-೨೦೨೬ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಶ್ರೀ ಮಾಚಿದೇವರ ಜೀವನ ಮೌಲ್ಯಗಳನ್ನು ಕುರಿತು ಉಪನ್ಯಾಸ, ವಚನ ಸಾಹಿತ್ಯ ಸಂರಕ್ಷಕ ಮತ್ತು ವೀರಗಣಾಚಾರಿ ಶ್ರೀ ಮಡಿವಾಳ ಮಾಚಿದೇವರ ಮೂರ್ತಿ ಹಾಗೂ ವಚನ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ವೀರ ಮಡಿವಾಳರ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಅವರು ಶ್ರೀಗಳನ್ನು ಗೌರವಿಸಿ ಮಾತನಾಡಿ,


ಶ್ರೀಮಠವು ಅಭಿವೃದ್ಧಿಯಾದರೆ ನಮ್ಮ ಮಡಿವಾಳ ಸಮುದಾಯವೇ ಅಭಿವೃದ್ಧಿಯಾದಂತೆ, ಈಗಾಗಲೇ ನಾವು ಮೈಸೂರು ಜಿಲ್ಲೆಯಲ್ಲಿ ಸಮುದಾಯದವರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದೇವೆ. ರಾಜ್ಯಮಟ್ಟದ ಮನ ಮನೆಗೆ ಮಾಚಿದೇವ ೩೦ ದಿನಗಳ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಮೈಸೂರಿನಲ್ಲೇ ಬಿಡುಗಡೆ ಮಾಡುವ ಮೂಲಕ ಈ ಮಹತ್ತರವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಅತ್ಯಂತದ ಸಂತೋಷದ ವಿಷಯ, ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸ್ವಾಮೀಜಿಗಳ ಬೆನ್ನೆಲುಬಾಗಿ ನಾವು ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ವೀರ ಮಡಿವಾಳರ ಸಂಘದ ಗೌರವ ಅಧ್ಯಕ್ಷರಾದ ಬಿ.ಜಿ. ಕೇಶವ್, ಉಪಾಧ್ಯಕ್ಷರಾದ ಸಿ.ಎಸ್.ಮಹೇಶ, ಹುಣಸೂರು ತಾಲ್ಲೂಕು ಅಧ್ಯಕ್ಷರಾದ ಚಿಲ್ಕುಂದ ರವಿ, ಕಾರ್ಯದರ್ಶಿ ಕೆ. ರಾಘು ಹೊಸರಾಮನಹಳ್ಳಿ, ಸಾಲಿಗ್ರಾಮ ಅಧ್ಯಕ್ಷರಾದ ಹರ್ಷವರ್ಧನ್, ಉಪಾಧ್ಯಕ್ಷರಾದ ಬಲರಾಮ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ, ಸಾಲಿಗ್ರಾಮ ಸಂಘದ ಪದಾಧಿಕಾರಿಗಳು. ರಾಮಾಪುರ ಮಹೇಶ, ಶ್ರೀರಾಮ, ನಂಜನಗೂಡು ತಾಲ್ಲೂಕು ಅಧ್ಯಕ್ಷರಾದ ಚಂದ್ರು ಉಪಾಧ್ಯಕ್ಷ ಮಹೇಶ್, ಮತ್ತು ನಂಜನಗೂಡು ತಾಲ್ಲೂಕಿನ ಮತ್ತೊಬ್ಬ ಅಧ್ಯಕ್ಷರಾದ ಹೆಚ್.ಡಿ.ಪ್ರಸನ್ನ, ತಿ.ನರಸೀಪುರ ತಾಲ್ಲೂಕು ಅಧ್ಯಕ್ಷ ಕುರುಬೂರು ಮಹದೇವಸ್ವಾಮಿ, ಮೈಸೂರು ಜಿಲ್ಲಾ ಸಂಚಾಲಕರಾದ ಹನಗೂಡು ಬಸವರಾಜು, ಕೆಂಬಾಲ್ ಶ್ರೀರಾಮು, ಹುಣಸೂರು ಪ್ರಭಾಕರ್, ಬನ್ನೂರು ಅಧ್ಯಕ್ಷ ನಾಗರಾಜು, ಹಾಗೂ ವಿ.ಮಹೇಶ, ಬೃಂದಾವನ ಅಧ್ಯಕ್ಷರಾದ ಮಹೇಶ್, ಕರ್ನಾಟಕ ರಾಜ್ಯ ಅಹಿಂದ ಒಕ್ಕೂಟದ ಅಧ್ಯಕ್ಷರಾದ ದ್ಯಾವಪ್ಪ ನಾಯಕ, ಕರ್ನಾಟಕ ರಾಜ್ಯ ನಾಯಕ ಹಿತರಕ್ಷಣಾ ಸಮಿತಿ ಸಂಚಾಲಕರಾದ ಪ್ರಭಾಕರ್ ಹುಣಸೂರು
ವೆಂಕಟೇಶ, ಚಂದ್ರು, ಸುನೀಲ್, ಮಿರ್ಲೆ ಚಂದ್ರು, ಮೈಸೂರು ತಾಲ್ಲೂಕು ಅಧ್ಯಕ್ಷ ಸಂತೋಷ ಕೀರಾಳ, ಕೋಟೆ ತಾಲ್ಲೂಕು ಅಧ್ಯಕ್ಷ ರಂಗಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಂಪಶೆಟ್ಟಿ, ಕೆ.ಆರ್.ನಗರ ತಾಲ್ಲೂಕು ಅಧ್ಯಕ್ಷರಾದ ಕುಮಾರ್ ಮತ್ತಿತರರು ಇದ್ದರು.

ಅಂತಿಮವಾಗಿ ಕಾರ್ಯಕ್ರಮವು ಮೈಸೂರು ಜಿಲ್ಲಾ ವೀರ ಮಡಿವಾಳರಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆದು ಎಲ್ಲ ಮುಖಂಡರೂ ಸೇರಿ ಶ್ರೀಗಳನ್ನು ಆತ್ಮೀಯವಾಗಿ ಗೌರವಿಸಿದರು.


ಸಾಮೂಹಿಕ ವಿವಾಹ:ಆರ್ಥಿಕವಾಗಿ ತೀರ ಹಿಂದುಳಿದಿರುವ ಮಡಿವಾಳ ಸಮುದಾಯದವರು ತಮ್ಮ ಮಕ್ಕಳ ಮದುವೆಗಾಗಿ ಸಾಲ ಮಾಡುವುದು ಬೇಡ, ಇದಕ್ಕಾಗಿ ನಾವು ಶ್ರೀಮಠದಲ್ಲಿ ವರ್ಷಕ್ಕೊಮ್ಮೆ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ಏರ್ಪಡಿಸಿದ್ದೇವೆ. ನಿಮ್ಮ ಕಡೆಯಿಂದ ಎಷ್ಟು ಜನ ಬಂದರೂ ಪ್ರಸಾದದ ವ್ಯವಸ್ಥೆಯನ್ನು ಮಠದಿಂದ ಮಾಡಲಾಗುತ್ತದೆ. ಸಮುದಾಯದವರು ಈ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಂಡು ಸಾಲದಿಂದ ಮುಕ್ತರಾಗಿ ಎಂದು ಶ್ರೀಗಳು ಸಲಹೆ ನೀಡಿದರು.