ಬಾಗಲಕೋಟೆ : ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಭಾರೀ ಮಳೆಯಾಗುತ್ತಿದ್ದು ಮುಧೋಳ-ಯಾದವಾಡ ರಾಜ್ಯ ಹೆದ್ದಾರಿಯ ಸೇತುವೆ ಮೇಲೆ ನೀರು ನುಗ್ಗಿದ್ದರಿಂದ ಉತ್ತೂರ, ಮಿರ್ಜಿ, ಮಾಲಾಪುರ, ಒಂಟಗೋಡಿ, ರಂಜನಗಿ, ರೂಗಿ, ಗುಲಗಾಲ ಜಂಬಗಿ, ಮೆಟಗುಡ್ಡ, ಯಾದವಾಡ ಸೇರಿ ಸುಮಾರು 23 ಅಧಿಕ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಘಟಪ್ರಭೆಗೆ ಹಿರಣ್ಯಕೇಶಿಯಿಂದ 52,000 ಕ್ಯೂಸೆಕ್, ಮಾರ್ಕಂಡೆಯದಿಂದ 5,543 ಕ್ಯೂಸೆಕ್ ಬಳ್ಳಾರಿ ನಾಲಾ ಜಲಾಶಯಗಳಿಂದ 2,221 ಕ್ಯೂಸೆಕ್ ಸೇರಿ ಸಂಜೆ ಸುಮಾರು 63 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವಿದೆ. ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಘಟಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದೆ.
ಮುಧೋಳದ ಯಾದವಾಡ ಸೇತುವೆ ಮೇಲೆ ಘಟಪ್ರಭಾ ನದಿ ಪ್ರವಾಹ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಅಧಿಕಾರಿಗಳು ಪರಿಶೀಲಿಸಿದರು. ಈಗಾಗಲೇ ತಾಲ್ಲೂಕಿನ 11 ಬ್ಯಾರೇಜ್‌ಗಳು ಮುಳುಗಡೆಯಾಗಿವೆ. ಮಿರ್ಜಿ ಗ್ರಾಮದಲ್ಲಿ ನೀರು ಬಂದಿದ್ದು 34 ಕುಟುಂಬಗಳ 178 ಜನರನ್ನು ಕಾಳಜಿ ಕೇಂದ್ರದಲ್ಲಿ ರಕ್ಷಿಸಲಾಗಿದೆ.
ಪ್ರವಾಹ ಪೀಡಿತ ಸ್ಥಳಕ್ಕೆ ತಹಶೀಲ್ದಾರ್ ಮಹಾದೇವ ಸನಮುರಿ ಹಾಗೂ ಅಧಿಕಾರಿಗಳ ತಂಡಗಳು ಪರಿಸ್ಥಿತಿಯನ್ನು ವೀಕ್ಷಿಸಿದೆ. ಮುಧೋಳದ ಮೂರು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಧಿಕಾರಿಗಳು ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ಸನ್ನದ್ಧರಾಗಬೇಕು ಎಂದರು.















