ಮನೆ ಕ್ರೀಡೆ ಭಾರತದಲ್ಲಿ ಅದ್ಭುತ ಬೌಲಿಂಗ್ ಪ್ರತಿಭೆಗಳಿವೆ: ರಾಹುಲ್ ದ್ರಾವಿಡ್

ಭಾರತದಲ್ಲಿ ಅದ್ಭುತ ಬೌಲಿಂಗ್ ಪ್ರತಿಭೆಗಳಿವೆ: ರಾಹುಲ್ ದ್ರಾವಿಡ್

0

ಮುಂಬೈ(Mumbai): ಪ್ರಸ್ತುತ ಭಾರತದಲ್ಲಿ ಸಾಕಷ್ಟು ಸಂಖ್ಯೆಯ ವೇಗದ ಬೌಲರ್​ಗಳು ತಮ್ಮ ಪ್ರತಿಭೆಯಿಂದ ಮಿಂಚುತ್ತಿರುವುದು ಭಾರತ ಕ್ರಿಕೆಟ್​ನ ರೋಮಾಂಚಕ ಸಮಯವಾಗಿದೆ ಎಂದು ಟೀಂ ಇಂಡಿಯಾ ಚೀಫ್ ಕೋಚ್ ರಾಹುಲ್ ದ್ರಾವಿಡ್ ಮೆಚ್ಚುಗೆ ಸೂಚಿಸಿದ್ದಾರೆ.

ಈ ಬೌಲಿಂಗ್ ಪ್ರತಿಭೆಗಳಲ್ಲಿ ಕೆಲವರಾದರೂ ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಆಡಲಿ ಎಂದು ಹಾರೈಸಿದ್ದಾರೆ.

ಸನ್ ರೈಸರ್ ಹೈದರಾಬಾದ್ ತಂಡಕ್ಕಾಗಿ ಆಡಿದ, 157 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ ಉಮ್ರಾನ್ ಮಲಿಕ್ ಸೇರಿದಂತೆ ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ ಮತ್ತು ಕುಲದೀಪ್ ಸೇನ್ ಮುಂತಾದವರು ಐಪಿಎಲ್​ 2022ರ ನಂತರ ಅದ್ಭುತ ಬೌಲರ್​ಗಳಾಗಿ ಗುರುತಿಸಿಕೊಂಡಿದ್ದಾರೆ ಎಂದು ದ್ರಾವಿಡ್ ತಿಳಿಸಿದ್ದಾರೆ.

ಟೀಂ ಇಂಡಿಯಾಗೆ ತಮ್ಮ ಕೋಚಿಂಗ್ ಅನುಭವದ ಬಗ್ಗೆ ಮಾತನಾಡಿದ ರಾಹುಲ್ ದ್ರಾವಿಡ್, ನನ್ನ ಕೋಚಿಂಗ್ ಅವಧಿಯ ಅನುಭವ ತುಂಬಾ ರೋಮಾಂಚಕಾರಿಯಾಗಿತ್ತು. ಜೊತೆಗೆ ಅಷ್ಟೇ ಚಾಲೆಂಜಿಂಗ್ ಸಹ ಆಗಿತ್ತು. ಕಳೆದ 8 ತಿಂಗಳಲ್ಲಿ ಎಂಟು ಕ್ಯಾಪ್ಟನ್​ಗಳನ್ನು ನೋಡಿದ್ದೇವೆ. ನಾನು ಕೆಲಸ ಆರಂಭಿಸಿದಾಗ ಇಷ್ಟೊಂದು ಕ್ಯಾಪ್ಟನ್​ಗಳ ಬದಲಾವಣೆ ವಿಚಾರ ಇರಲಿಲ್ಲ. ಆದರೆ ನಾವು ಆಡುತ್ತಿರುವ ಪಂದ್ಯಗಳ ಸಂಖ್ಯೆ, ಕೋವಿಡ್ ಪರಿಸ್ಥಿತಿ ಮುಂತಾದವುಗಳಿಂದ ಸಹಜವಾಗಿಯೇ ಇದೆಲ್ಲ ನಡೆಯಿತು. ಸಾಕಷ್ಟು ಸಂಖ್ಯೆಯ ಹೊಸಬರಿಗೆ ಅವಕಾಶ ಸಿಗುವಂತಾಯಿತು. ಇದರಿಂದ ಹೊಸ ನಾಯಕರೂ ಹುಟ್ಟಿಕೊಂಡರು ಎಂದು ದ್ರಾವಿಡ್ ಹೇಳಿದ್ದಾರೆ.

ಐಪಿಎಲ್ ಸಂದರ್ಭದಲ್ಲಿ ಭಾರತದ ಫಾಸ್ಟ್ ಬೌಲಿಂಗ್ ಪ್ರತಿಭೆಗಳು ಮಿಂಚಿದ್ದು ಅದ್ಭುತ ವಿಷಯ. ಕೆಲ ಬೌಲರ್​ಗಳಂತೂ ಅಷ್ಟೊಂದು ವೇಗದ ಬೌಲಿಂಗ್ ಮಾಡಿದ್ದು ಆಶ್ಚರ್ಯಕರ. ಭಾರತದಲ್ಲಿರುವ ಸಾಕಷ್ಟು ಯುವ ಬೌಲಿಂಗ್ ಪ್ರತಿಭೆಗಳು ಬೆಳಕಿಗೆ ಬಂದಿವೆ. ಒಟ್ಟಾರೆಯಾಗಿ ಇದೆಲ್ಲ ಭಾರತೀಯ ಕ್ರಿಕೆಟ್​ಗೆ ಒಳ್ಳೆಯ ಅಂಶಗಳು ಎಂದರು.