ಮನೆ ಸುದ್ದಿ ಜಾಲ ಧರ್ಮಸ್ಥಳ ಬಳಿಕ ಚಾಮುಂಡೇಶ್ವರಿ ಚಲೋ – ಆರ್‌. ಅಶೋಕ್

ಧರ್ಮಸ್ಥಳ ಬಳಿಕ ಚಾಮುಂಡೇಶ್ವರಿ ಚಲೋ – ಆರ್‌. ಅಶೋಕ್

0

ಬೆಂಗಳೂರು : ಚಾಮುಂಡೇಶ್ವರಿ ದೇವಾಲಯದ ಪಾವಿತ್ರ‍್ಯತೆಗೆ ಧಕ್ಕೆಯಾದರೆ ‘ಧರ್ಮಸ್ಥಳ ಚಲೋ’ ಮಾದರಿಯಲ್ಲಿ ‘ಚಾಮುಂಡೇಶ್ವರಿ ಚಲೋ’ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಚಾಮುಂಡಿ ಬೆಟ್ಟದ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರಕ್ಕೆ ಚಾಮುಂಡೇಶ್ವರಿ ತಾಯಿ ಒಳ್ಳೆಯ ಬುದ್ಧಿಯನ್ನು ನೀಡಲಿ. ಹಿಂದೂಗಳ ಶ್ರದ್ಧಾ ಕೇಂದ್ರವನ್ನು ಟಾರ್ಗೆಟ್ ಮಾಡುವ ಮನಸ್ಥಿತಿಯನ್ನು ನಿವಾರಿಸಲಿ. ಹಿಂದೂಗಳ ಧಾರ್ಮಿಕ ಕೇಂದ್ರ ಯಾವಾಗಲೂ ರಕ್ಷಣೆಯಾಗಬೇಕು, ಪವಿತ್ರವಾಗಿ ಇರಬೇಕು. ಹಿಂದೂಗಳ ಭಾವನೆಗೆ ಧಕ್ಕೆಯಾಗಬಾರದು ಎಂದು ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಮೈಸೂರಿನ ಒಡೆಯರ್ ರಾಜವಂಶಸ್ಥರು ನೂರಾರು ವರ್ಷಗಳಿಂದಲೂ ದಸರಾ ಆಚರಿಸಿಕೊಂಡು ಬಂದಿದ್ದಾರೆ. ಇಂತಹ ಪವಿತ್ರವಾದ ಹಬ್ಬವನ್ನು ಕಾಂಗ್ರೆಸ್ ಸರ್ಕಾರ ಅಪವಿತ್ರ ಮಾಡಬಾರದು. ಇದು ಹಿಂದೂಗಳ ದೇವಾಲಯ ಅಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಚುನಾವಣೆ ಸಮಯದಲ್ಲಿ ಮುಸ್ಲಿಮರ ಮೂಗಿಗೆ ತುಪ್ಪ ಸವರಲಿ. ಅದನ್ನು ಬಿಟ್ಟು ಈ ಸಮಯದಲ್ಲಿ ಓಲೈಕೆ ಮಾಡಲಾಗುತ್ತಿದೆ. ಧರ್ಮಸ್ಥಳಕ್ಕೆ ನಾವೆಲ್ಲರೂ ಹೋಗಿ ಧರ್ಮಸ್ಥಳ ಚಲೋ ಮಾಡಲಿದ್ದೇವೆ. ಚಾಮುಂಡೇಶ್ವರಿ ದೇವಾಲಯಕ್ಕೆ ಧಕ್ಕೆಯಾದರೆ ಆಗ ಚಾಮುಂಡೇಶ್ವರಿ ಚಲೋ ಎಂದು ಹೋರಾಟ ಮಾಡುತ್ತೇವೆ. ಅಯೋಧ್ಯೆಯನ್ನು ಉಳಿಸಲು 500 ವರ್ಷ ಹೋರಾಡಿದ್ದೇವೆ. ಟೂಲ್ ಕಿಟ್ ಸಂಸ್ಕೃತಿ ಮುಂದುವರಿಸಿದರೆ ಕಾಂಗ್ರೆಸ್‌ನ ಅವನತಿ ಆರಂಭವಾಗಲಿದೆ ಎಂದು ಹೇಳಿದರು.