ಮನೆ ರಾಜ್ಯ ರಾಜ್ಯದಲ್ಲಿ ಮುಂಗಾರು ಚುರುಕು

ರಾಜ್ಯದಲ್ಲಿ ಮುಂಗಾರು ಚುರುಕು

0

ಮಂಗಳೂರು (Mangalore): ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಚುರುಕುಗೊಂಡಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್ 25ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ ನಾಲ್ಕು ದಿನಗಳ ಕಾಲ 20.4 ಸೆಂ.ಮೀ.ವರೆಗೂ ಮಳೆಯಾಗುವ ಸಾಧ್ಯತೆಗಳಿದ್ದು, ಗಂಟೆಗೆ 45 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ನದಿ ಹಾಗೂ ಸಮುದ್ರದ ತೀರಗಳಲ್ಲಿ ವಾಸವಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಎಚ್ಚರಿಕೆ ನೀಡಿದೆ.

ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರ ಬಿರುಸಿನ ಮಳೆಯಾಗಿದೆ. ತಿಂಗಳ ಆರಂಭದಲ್ಲೇ ರಾಜ್ಯದ ಕರಾವಳಿಗೆ ಮುಂಗಾರು ಪ್ರವೇಶವಾಗಿದ್ದರೂ ಮಳೆಯ ತೀವ್ರತೆ ಪಡೆದುಕೊಂಡಿರಲಿಲ್ಲ. ಇದೀಗ ಎರಡು ದಿನಗಳಿಂದ ಮುಂಗಾರು ಚುರುಕುಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸಂಜೆಯಿಂದ ಬಿಟ್ಟು ಬಿಟ್ಟು ಮಳೆಯಾಗುತ್ತಲಿತ್ತು. ಮಂಗಳವಾರ ಬೆಳಿಗ್ಗೆಯೂ ಸಣ್ಣದಾಗಿ ಮಳೆ ಪ್ರಾರಂಭವಾಗಿತ್ತು. ಮಧ್ಯಾಹ್ನದ ವೇಳೆ ಮಳೆ ಆರ್ಭಟ ಜೋರಾಯಿತು. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಮಧ್ಯಾಹ್ನ ಸುಮಾರು ಎರಡು ತಾಸು ಎಡೆಬಿಡದೆ ಧಾರಾಕಾರ ಮಳೆ ಸುರಿಯಿತು.

ಮಂಗಳೂರು ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ವಾಹನ ಸಂಚಾರಕ್ಕೂ ಕೆಲ ಕಾಲ ಅಡ್ಡಿ ಉಂಟಾಯಿತು. ತಗ್ಗು ಪ್ರದೇಶದಲ್ಲಿರುವ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು. ಮೂಲ್ಕಿ ಬಳಿ ರಸ್ತೆಗೆ ಮರ ಉರುಳಿ ಬಿದ್ದಿದ್ದು, ಅದನ್ನು ತಕ್ಷಣವೇ ತೆರವುಗೊಳಿಸಲಾಯಿತು.

ಉಡುಪಿ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಬಿರುಸಿನ ಮಳೆ ಸುರಿಯುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದೆ. ಉಪ್ಪೂರಿನಲ್ಲಿ 10.1 ಸೆಂ.ಮೀ ಮಳೆ ಬಿದ್ದಿದೆ.