ಬೆಂಗಳೂರು : ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ಹೋರಾಟ ಆರ್‌ಎಸ್‌ಎಸ್ ವರ್ಸಸ್ ಆರ್‌ಎಸ್‌ಎಸ್ ಮಧ್ಯೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಗಿರೀಶ್ ಮಟ್ಟಣ್ಣನವರ್, ಬಿಜೆಪಿಯ ಸಕ್ರಿಯ ಕಾರ್ಯಕರ್ತ, ಯುವಮೋರ್ಚಾದ ಅಧ್ಯಕ್ಷರಾಗಿದ್ದವರು. 2013ರಲ್ಲಿ ಗುರ್ಮಿಟ್ಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದವರು.
ಮಹೇಶ್ ಶೆಟ್ಟಿ ತಿಮರೋಡಿ, ಸಂಘಪರಿವಾರದ ನಾಯಕರು. ಸದಾ ಸಾವರ್ಕರ್, ಗೋಲ್ವಾಲ್ಕರ್ ಫೋಟೋ ಇಟ್ಟುಕೊಂಡಿರುವವರು, ಕೇಸರಿ ಶಾಲು ಹಾಕಿಕೊಂಡಿರುವವರು. ಇದು ಪಕ್ಕಾ ಆರ್‌ಎಸ್‌ಎಸ್ ವಿರುದ್ಧ ಆರ್‌ಎಸ್‌ಎಸ್ ಹೋರಾಟ ಎಂದರು.
ಬಿಜೆಪಿಯವರಿಗೆ ಯಾವ ಆರ್‌ಎಸ್‌ಎಸ್‌ನವರಿಗೆ ತಲೆ ಬಾಗಬೇಕು ಎಂದು ಗೊತ್ತಾಗುತ್ತಿಲ್ಲ. ಆರ್‌ಎಸ್‌ಎಸ್ ಬಣಗಳಿಗೆ ಖುಷಿ ಪಡಿಸಲು ಬಿಜೆಪಿಯವರು ಇದೆಲ್ಲ ಮಾಡುತ್ತಿದ್ದಾರೆ ಎಂದು ಟಕ್ಕರ್ ಕೊಟ್ಟರು.
ಬಿಜೆಪಿಯವರು ಧರ್ಮಸ್ಥಳ ಚಲೋ, ಚಾಮುಂಡಿ ಚಲೋ ಬಿಟ್ಟು ಕನ್ನಡಿಗರ ಪರ ದೆಹಲಿ ಚಲೋ ಮಾಡಲಿ, ಹೋಗಿ ನ್ಯಾಯ ಕೇಳಲಿ. ರಾಜ್ಯಕ್ಕೆ ಸಿಗಬೇಕಾದ ಅನುದಾನದ ಬಗ್ಗೆ ಹೋಗಿ ಕೇಳಲಿ. ಧರ್ಮಸ್ಥಳ ಚಲೋ ಮಾತ್ರ ಮಾಡೋದಲ್ಲ, ದೆಹಲಿ ಚಲೋ ಕೂಡಾ ಮಾಡಲಿ. ಬಿಜೆಪಿಯವರದ್ದು ಎಲ್ಲಾ ನಾಟಕ. ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಈ ರೀತಿ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾರ್ಕಳ ಶಾಸಕರಿಗೆ ಎಲ್ಲ ಗೊತ್ತಿದೆ ಅಂತ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರ ಬಳಿ ದಾಖಲೆ ಇದರೆ ಕೊಡಲಿ. ಸೌಜನ್ಯ ಪ್ರಕರಣದ ಎಲ್ಲ ಮಾಹಿತಿ, ದಾಖಲೆ ಬಿಜೆಪಿಯವ್ರ ಬಳಿ ಇದೆ ಅಂತ ಕಟೀಲ್ ಹೇಳಿದ್ದಾರೆ. ದಾಖಲೆ ಇದ್ರೆ ನ್ಯಾಯ ಕೊಡಿಸಲಿ. ಎಸ್‌ಐಟಿ ತನಿಖೆಗೆ ಇವರೇ ಸ್ವಾಗತಿಸಿದರು.
ಈಗ ಏನಾಯ್ತು, ವಿರೋಧ ಮಾಡುತ್ತಿದ್ದಾರಲ್ಲ ಯಾಕೆ? ಬಿಜೆಪಿ ಅವರಲ್ಲೇ ದ್ವಂದ್ವ ನಿಲುವು ಇದೆ. ಮೊದಲು ಬಿಜೆಪಿಯವರು ಸ್ಪಷ್ಟತೆ ಹೊಂದಲಿ. ನಮ್ಮ ಸರ್ಕಾರದಲ್ಲಿ ತನಿಖೆ ಬಿಗಿಯಾಗಿ ನಡೀತಿದೆ. ಎನ್‌ಐಎ ತನಿಖೆ ಅಗತ್ಯ ಇಲ್ಲ, ಇದನ್ನು ಪರಮೇಶ್ವರ್ ಸಹ ಹೇಳಿದ್ದಾರೆ ಎಂದು ಹೇಳಿದರು.















