ನಾಗಿಣಿ ಧಾರಾವಾಹಿಯ ಮೂಲಕ ನಾಡಿನ ಜನರ ಮನಗೆದ್ದ ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾ ಗೌಡ ಹೆಸರಾಂತ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನದ, ಪ್ರತಿಷ್ಠಿತ ಸಂಸ್ಥೆಯ ಸಹಯೋಗದೊಂದಿಗೆ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಅವರು ನಿರ್ಮಿಸುತ್ತಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ ಮಹಾನ್ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ನಾನು ಸಿನಿಮಾದಲ್ಲಿ ನಟಿಸುವಂತೆ ಅನೇಕ ಸ್ನೇಹಿತರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ನಾನು ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ. ನಿರ್ದೇಶಕ ಪಿ.ಸಿ.ಶೇಖರ್ ಅವರು ಮಹಾನ್ ಚಿತ್ರದ ಕಥೆ ಹೇಳಿದಾಗ, ಕಥೆ ಮನಸ್ಸಿಗೆ ಹತ್ತಿರವಾಯಿತು. ಕಥೆ ಕೇಳಿದ ತಕ್ಷಣ ನಟಿಸಲು ಒಪ್ಪಿಕೊಂಡೆ. ರೈತರ ಬದುಕು ಬವಣೆಗಳ ಸುತ್ತ ಹೆಣೆದಿರುವ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಟಿಸಲು ಬಹಳ ಸಂತೋಷವಾಗಿದೆ ಎಂದರು.
ಪ್ರಕಾಶ್ ಬುದ್ದೂರು ಅವರು ಯಾವುದೇ ಕೊರತೆ ಬಾರದ ಹಾಗೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಪಿ.ಸಿ.ಶೇಖರ್ ನಿರ್ದೇಶಿಸುತ್ತಿದ್ದಾರೆ. ವಿಜಯ ರಾಘವೇಂದ್ರ, ರಾಧಿಕಾ ಚೇತನ್, ಮಿತ್ರ ಮುಂತಾದ ಜನಪ್ರಿಯ ಹಾಗೂ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇದೆ. ನೈಜತೆಗೆ ಹತ್ತಿರವಾಗಿರುವ ಕಥೆಯುಳ್ಳ ಈ ಚಿತ್ರದಲ್ಲಿ ನಾನು ಅಭಿನಯಿಸುತ್ತಿರುವುದಕ್ಕೆ ಬಹಳ ಖುಷಿಯಾಗಿದೆ.















