ಮಂಡ್ಯ : ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಸಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ ಇಲ್ಲಿ ಕೋಮು ಗಲಭೆ ಆದ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಇಂದು ಮತ್ತು ನಾಳೆ ನಾಗಮಂಗಲ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.
ಕಳೆದ ವರ್ಷ ನಾಗಮಂಗಲ ಪಟ್ಟಣದ ಬದರಿಕೊಪ್ಪಲಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆ ಕಲ್ಲು ಹಾಗೂ ಪೆಟ್ರೋಲ್ ಬಾಂಬ್‌ಗಳನ್ನ ಎಸೆಯಲಾಗಿತ್ತು. ಬಳಿಕ ಕೋಮುಗಲಭೆ ಸೃಷ್ಟಿಯಾಗಿ ಅಪಾರ ಪ್ರಮಾಣ ಆಸ್ತಿಪಾಸ್ತಿ ನಷ್ಟವಾಗಿತ್ತು. ಈ ಬಾರಿ ಆ ರೀತಿಯ ಘಟನೆ ಮರುಕಳಿಸಬಾರದು ಎಂದು ಮಂಡ್ಯ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.
ಇಂದು ನಾಗಮಂಗಲ ಪಟ್ಟಣದ ಹಲವೆಡೆ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಗಳನ್ನು ಇಂದು ಸಾಮೂಹಿಕವಾಗಿ ವಿಸರ್ಜನೆ ಮಾಡಲಾಗುತ್ತಿದೆ. ಹೀಗಾಗಿ ಇಂದು ಮತ್ತು ನಾಳೆ ನಾಗಮಂಗಲ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೇ ನಾಗಮಂಗಲ ಪಟ್ಟಣ ಸೇರಿದಂತೆ ಸುತ್ತಮುತ್ತ 2 ದಿನಗಳ ಕಾಲ ಮದ್ಯ ಮಾರಟ ನಿಷೇಧ ಮಾಡಲಾಗಿದೆ.
ಪೊಲೀಸ್ ಇಲಾಖೆಯಿಂದಲೂ ಸಹ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಾಗಿದ್ದು, ಈಗಾಗಲೇ ಗಣಪತಿ ಮೆರವಣಿಗೆ ಹೋಗುವ ದಾರಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪೊಲೀಸರು ಪಥ ಸಂಚನ ನಡೆಸಿದ್ದಾರೆ. ಇನ್ನೂ ಮೆರವಣಿಗೆಯಲ್ಲಿ ಬಿಗಿ ಭದ್ರತೆ ಇದ್ದು, ಇಡೀ ಮೆರವಣಿಗೆ ಡ್ರೋನ್ ಕ್ಯಾಮರಾದ ಕಣ್ಗಾವಲಿನಲ್ಲಿ ಇರುತ್ತದೆ. ಇದಲ್ಲದೇ ದಾರಿಯುದ್ಧಕ್ಕೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.














