ಈದ್ ಮಿಲಾದ್ ಪ್ರಯುಕ್ತ ಅರಮನೆ ಮೈದಾನದಲ್ಲಿಂದು ಆಯೋಜಿಸಿರುವ ʻಮಿಲದುನ್ನಬಿʼ ಕಾರ್ಯಕ್ರಮದಲ್ಲಿ ಭಾಗಿಯಾಗುವ ವಿದೇಶಿ ಧಾರ್ಮಿಕ ಮುಖಂಡರು ಹಾಗೂ ಕಾರ್ಯಕ್ರಮದ ಮೇಲೆ ಖಾಕಿ ಹದ್ದಿನ ಕಣ್ಣಿಟ್ಟಿದೆ.
ಭಾರತದ ವೀಸಾ ನಿಯಮಗಳನ್ನ ಉಲ್ಲಂಘನೆ ಮಾಡದಂತೆ ಕಾರ್ಯಕ್ರಮ ಆಯೋಜಕರಿಗೆ ಈಗಾಗಲೇ ಪೊಲೀಸ್ರು ಸೂಚನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಭಾಗಿಯಾಗ್ತಿದ್ದು, ಸಿಎಂ ಹಾಗೂ ಡಿಸಿಎಂಗೆ ಮುಜುಗರ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಆಗಮಿಸುವ ವಿದೇಶಿ ಗಣ್ಯರು ಕೇವಲ ಗೆಸ್ಟ್ ಆಗಿರಬೇಕು. ಕಾರ್ಯಕ್ರಮದಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ಮಾತನಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಉಮರ್ ಬಿನ್ ಹಮಿದ್ ಅಲ್ ಜೀಲಾನಿ, ಶೇಖ್ ಮುಹಮ್ಮದ್ ಉಪಾದ್ ಅಲ್ ಶಂಶಿರಿ, ಅಬ್ದುಲ್ ಖಬೀರ್ ಅಲ್ ಮದಿನಾ, ಖಾದರ್ ಅಲ್ ಜೀಲಾನಿ ಭಾಗಿ ಸಾಧ್ಯತೆಯಿದೆ.
ಇಡೀ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ ಮಾಡಲಿದ್ದು, ಆಯೋಜಕರು ಹಾಗೂ ಪೊಲೀಸ್ ಇಲಾಖೆಯಿಂದ ವಿಡಿಯೋಗ್ರಫಿ ಮಾಡಲಾಗುತ್ತೆ. ಅಲ್ಲದೇ ಎಫ್ಆರ್‌ಆರ್‌ಓ ನಿಂದಲೂ ನಿಗಾ ವಹಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಿದೇಶಿ ಮುಖಂಡರಿಂದ ಭಾಷಣ, ಸಂದೇಶ ಸಾಧ್ಯತೆಯಿದೆ. ಆದ್ದರಿಂದ ಎಲ್ಲರ ಭಾಷಣಗಳ ಮೇಲೂ ಖಾಕಿ ನಿಗಾ ವಹಿಸಿದೆ.
ಈ ನಡುವೆ ಅರಮನೆ ಮೈದಾನದಲ್ಲಿ ಈದ್ ಮೀಲಾದ್ ಸಮಾವೇಶಕ್ಕೆ ವಿದೇಶಿ ಮುಸ್ಲಿಂ ಧರ್ಮಗುರುಗಳಿಗೆ ನೀಡಿದ್ದ ಆಹ್ವಾನ ರದ್ದುಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಇನ್ನುಳಿದಂತೆ ಅರಮನೆ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸುಮಾರು 500ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಜಂಟಿ ಆಯುಕ್ತರು, ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ನಿಯೋಜನೆ ಮಾಡಿಕೊಳ್ಳಲಾಗಿದೆ.















