ಮನೆ ದೇವರ ನಾಮ ಮಂಗಳವಾರ ದಿನದಂದು ಹನುಮನ ದೇವರನ್ನು ಪೂಜಿಸಿ; ಪೂಜೆಯಲ್ಲಿ ಈ ತಪ್ಪುಗಳನ್ನು ಮಾಡದಿರಿ..!

ಮಂಗಳವಾರ ದಿನದಂದು ಹನುಮನ ದೇವರನ್ನು ಪೂಜಿಸಿ; ಪೂಜೆಯಲ್ಲಿ ಈ ತಪ್ಪುಗಳನ್ನು ಮಾಡದಿರಿ..!

0

ಇಂದು ಮಂಗಳವಾರ. ಈ ದಿನ ಹನುಮನ ಪೂಜೆಗೆಂದೇ ಮೀಸಲು ಇಡಬೇಕು. ಮಂಗಳವಾರವನ್ನು ಹನುಮನಿಗೆ ಅರ್ಪಿತವಾದ ದಿನ. ಹಿಂದೂ ಪುರಾಣಗಳಲ್ಲಿ, ಹನುಮನನ್ನು ಶಿವನ ಅವತಾರ ಎಂದು ಪರಿಗಣಿಸಲಾಗಿದೆ. ಭಗವಾನ್ ಹನುಮ ಶಕ್ತಿ, ಧೈರ್ಯದ ಸಂಕೇತವಾಗಿದೆ. ಆಂಜನೇಯ ಭಕ್ತರ ಜೀವನದ ಅಡೆತಡೆಗಳು ಮತ್ತು ಭಯಗಳನ್ನು ನಿವಾರಿಸುತ್ತಾನೆ ಎಂದು ನಂಬುತ್ತಾರೆ.

ಆದ್ದರಿಂದ ಧೈರ್ಯ ಸ್ವರೂಪಿ ಹನುಮನನ್ನು ಈ ದಿನ ಭಕ್ತರು ಹನುಮನನ್ನು ಪೂಜಿಸುತ್ತಾರೆ ಮತ್ತು ಕೆಲವರು ಉಪವಾಸವನ್ನು ಸಹ ಆಚರಿಸುತ್ತಾರೆ. ಮುಂಜಾನೆಯೇ ಎದ್ದು ಸ್ನಾನ ಮಾಡಿ ಶುದ್ಧವಾದ ಬಟ್ಟೆಗಳನ್ನು ಧರಿಸಬೇಕು. ಸೂರ್ಯ ಭಗವಂತನಿಗೆ ಅರ್ಘ್ಯವನ್ನು ಅರ್ಪಿಸಿ ಹನುಮಾನ್ ಚಾಲಿಸಾ ಜಪ ಮಾಡಬೇಕು. ನೀವು ಹನುಮಾನ್ ಚಾಲಿಸಾ ಜಪಿಸುತ್ತಿರುವಾಗ, ಕೆಂಪು ಮತ್ತು ಕಿತ್ತಳೆ ಬಣ್ಣದ ಹೂವುಗಳನ್ನು ಅರ್ಪಿಸಿ, ದೀಪ ಹಚ್ಚಿ, ಪೂಜಿಸಬೇಕು.

ಮಂಗಳವಾರದಂದು ಹನುಮಂತನ ಪೂಜೆಗೆ ವಿಶೇಷ ಮಹತ್ವವಿದೆ. ಆದ್ದರಿಂದ ಹನುಮಂತನನ್ನು ಪೂಜಿಸಲಾಗುತ್ತದೆ. ಮಂಗಳವಾರದಂದು ಅಂದರೆ ಇಂದು ಹನುಮಂತನನ್ನು ಪೂಜಿಸುವುದರಿಂದ ಭಕ್ತರ ಕಷ್ಟಗಳೆಲ್ಲವೂ ದೂರಾಗುತ್ತದೆ.

ಆರೋಗ್ಯದ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ, ನಕಾರಾತ್ಮಕ ಶಕ್ತಿಯಿಂದ ದೂರಿರುವಿರಿ ಮತ್ತು ಆಸೆಗಳೆಲ್ಲವೂ ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಮಂಗಳವಾರದಂದು ಹನುಮಂತನನ್ನು ಪೂಜಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಈ ನಿಯಮಗಳನ್ನು ಪಾಲಿಸಿದರೆ ಮಾತ್ರ ಹನುಮನ ಕೃಪೆ ನಿಮಗಿರುತ್ತದೆ. ಆ ನಿಯಮಗಳಾವುವು..? ಮಂಗಳವಾರದಂದು ಹನುಮಂತನನ್ನು ಹೇಗೆ ಪೂಜಿಸಬೇಕು..? ಮಂಗಳವಾರ ಹನುಮಂತನನ್ನು ಪೂಜಿಸುವಾಗ ಅಪ್ಪಿ-ತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ.

​ಪತಿ – ಪತ್ನಿಯರು ಇಂದು ದೂರವಿರಬೇಕು – ರಾಮನ ಶ್ರೇಷ್ಠ ಭಕ್ತನಾದ ಹನುಮನು ಯಾವಾಗಲೂ ಬ್ರಹ್ಮಚರ್ಯವನ್ನು ಅನುಸರಿಸಿದವನು. ಆದ್ದರಿಂದ ಯಾರು ಇಂದು ಹನುಮಂತನನ್ನು ಪೂಜಿಸುತ್ತಾರೋ ಅವರು ಬ್ರಹ್ಮರ್ಯದಿಂದಿರಬೇಕು. ಈ ದಿನದಂದು ವಿವಾಹಿತರೂ ಕೂಡ ತನ್ನ ಪತ್ನಿಯಿಂದ ಅಥವಾ ಪತಿಯಿಂದ ದೂರವಿದ್ದು ಬ್ರಹ್ಮಚರ್ಯವನ್ನು ಪಾಲಿಸಬೇಕು.

ಶುದ್ಧತೆ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ – ಹನುಮಂತನ ಪೂಜೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹನುಮಂತನನ್ನು ಪೂಜಿಸುವವರು ಪೂಜೆಗೂ ಮುನ್ನ ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಯನ್ನು ಧರಿಸಬೇಕು. ಹನುಮನ ವಿಗ್ರಹವನ್ನೋ ಅಥವಾ ಫೋಟೋವನ್ನೋ ಇಟ್ಟು ಪೂಜಿಸುವ ಸ್ಥಳದಲ್ಲಿ ಶುದ್ಧತೆ ಹಾಗೂ ಸ್ವಚ್ಛತೆಯನ್ನು ಕಾಯ್ದುಕೊಳ್ಳಿ.

​ಮಾಂಸಹಾರ ಮತ್ತು ಮದ್ಯ ಸೇವನೆ ಬೇಡ – ಇಂದು ನೀವು ಹನುಮಂತನನ್ನು ಪೂಜಿಸುವುದಾದರೆ ಮೊದಲು ಮಾಂಸಾಹಾರ ಸೇವನೆಯಿಂದ ಮದ್ಯಪಾನ ಸೇವನೆಯಿಂದ ದೂರವಿರಬೇಕು. ಹನುಮಂತನನ್ನು ಪೂಜಿಸುವವರು ಸಸ್ಯಹಾರವನ್ನು ಮಾತ್ರ ಸೇವಿಸಬೇಕು ಮತ್ತು ಸದ್ಗುಣಗಳನ್ನು ರೂಢಿಸಿಕೊಳ್ಳಬೇಕೆಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯರು ಎಂದಿಗೂ ಇದನ್ನು ಮರೆಯಬಾರದು – ಹನುಮಂತನು ಬಾಲ್ಯದಿಂದಲೇ ಬ್ರಹ್ಮಚರ್ಯವನ್ನು ಅನುಸರಿಸಿಕೊಂಡು ಬಂದವನು ಹಾಗೂ ಆತನನ್ನು ಅವಿವಾಹಿತನೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮಹಿಳೆಯರು ಎಮದಿಗೂ ಹನುಮಂತನ ಪೂಜೆಯಲ್ಲಿ ತಮ್ಮಿಂದ ಬಟ್ಟೆಯನ್ನು ನೀಡಬಾರದು ಅಥವಾ ವಸ್ತ್ರವನ್ನು ನೀಡಬಾರದು. ಒಂದುವೇಳೆ ನೀವು ಅಂತಹ ಹರಕೆಯನ್ನಾಗಲಿ ಅಥವಾ ನಿಯಮಗಳನ್ನಾಗಲಿ ಅನುಸರಿಸಿಕೊಂಡು ಬಂದಿದ್ದರೆ ನೀವು ನೀಡಬೇಕೆಂದುಕೊಂಡ ವಸ್ತ್ರವನ್ನು ನಿಮ್ಮ ಪತಿ ಅಥವಾ ಪುತ್ರನ ಕೈಯಿಂದ ಅರ್ಪಿಸಬಹುದು.

ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು..? – ಮಂಗಳವಾರದಂದು ಮತ್ತು ಶನಿವಾರದಂದು ನೀವು ಹನುಮಂತನನ್ನು ಪೂಜಿಸುವಾಗ ಕಪ್ಪು ಮತ್ತು ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ ಪೂಜಿಸಬಾರದು. ಹನುಮಂತನನ್ನು ಪೂಜಿಸುವಾಗ ಯಾವಾಗಲೂ ನೀವು ಕೆಂಪು, ಕೇಸರಿ ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಹನುಮಂತನನ್ನು ಪೂಜಿಸಬೇಕು. ಹನುಮಂತನಿಗೆ ಕೆಂಪು ಮತ್ತು ಕೇಸರಿ ಬಣ್ಣವೆಂದರೆ ಅತ್ಯಂತ ಪ್ರಿಯವಾದ ಬಣ್ಣವಾಗಿದೆ. ಆದ್ದರಿಂದ ಆತನ ಪೂಜೆಯಲ್ಲಿ ಈ ಬಣ್ಣದ ಬಟ್ಟೆಯನ್ನು ಧರಿಸಿ.

ಶಾಂತ ಮನಸ್ಸಿನಿಂದ ಹನುಮಂತನನ್ನು ಪೂಜಿಸಿ – ಒಂದು ವೇಳೆ ಇಂದು ನಿಮ್ಮ ಮನಸ್ಸು ಸರಿಯಿಲ್ಲದಿದ್ದರೆ, ಯಾವುದೋ ಕಾರಣದಿಂದ ಮನಸ್ಸು ಅಶಾಂತಿಯಲ್ಲಿದ್ದರೆ ನೀವು ಹನುಮಂತನನ್ನು ಪೂಜಿಸಬಾರದು. ಶಾಂತ ಹಾಗೂ ಗೊಂದಲವಿಲ್ಲದ ಮನಸ್ಸಿನಿಂದ ಮಾತ್ರ ಹನುಮಂತನನ್ನು ಆರಾಧಿಸಬೇಕು.

​ಚರಣಾಮೃತವನ್ನು ಬಳಸದಿರಿ – ಹನುಮಂತನ ಪೂಜೆಯಲ್ಲಿ ಚರಣಾಮೃತವನ್ನು ಬಳಸಬಾರದು. ಆದರೆ ಕಡ್ಡಾಯವಾಗಿ ತುಳಸಿಯನ್ನು ಬಳಸಬೇಕು. ರಾಮಾಯಣದ ಸಮಯದಲ್ಲಿ ಸೀತೆಯು ಹನುಮಂತನಿಗೆ ಊಟವನ್ನು ನೀಡುತ್ತಾಳೆ. ಸೀತೆ ಎಷ್ಟೇ ಊಟವನ್ನು ನೀಡಿದರೂ ಕೂಡ ಹನುಂತನಿಗೆ ಹೊಟ್ಟೆ ತುಂಬುವುದಿಲ್ಲ. ಆಗ ಸೀತೆ ಹನುಮಂತನಿಗೆ ತುಳಸಿ ಎಲೆಯನ್ನು ಸೇವಿಸಲು ನೀಡುತ್ತಾಳೆ. ಅದನ್ನು ತಿಂದ ನಂತರ ಹೊಟ್ಟೆ ತುಂಬಿತು. ಆದ್ದರಿಂದ ಹನುಮಂತನ ಪೂಜೆಯಲ್ಲಿ ಕಡ್ಡಾಯವಾಗಿ ತುಳಸಿ ಎಲೆಗಳನ್ನು ಬಳಸಬೇಕು.

ಮುರಿದ ಹನುಮನ ವಿಗ್ರಹವನ್ನು ಪೂಜಿಸಬಾರದು – ಹನುಮಂತನನ್ನು ಪೂಜಿಸುವಾಗ ಆತನ ಮುರಿದ ವಿಗ್ರಹವನ್ನು ಪೂಜಿಸಬಾರದು. ಒಂದು ವೇಳೆ ನಿಮ್ಮ ಮನೆಯಲ್ಲಿ ಮುರಿದ ಅಥವಾ ತುಂಡಾದ ಹನುಮನ ವಿಗ್ರಹವಿದ್ದರೆ ತಕ್ಷಣವೇ ಅದನ್ನು ಬದಲಾಯಿಸಿ. ಮುರಿದ ಹನುಮನ ವಿಗ್ರಹವನ್ನು ಪೂಜಿಸುವುದು ಶ್ರೇಯಸ್ಕರವಲ್ಲ.