ಮನೆ ರಾಜ್ಯ ಕಾಗದ ಉತ್ಪನ್ನಗಳ ಜಿಎಸ್‌ಟಿ ದರ ಗೊಂದಲ – ನೋಟ್‌ಬುಕ್ ಬೆಲೆ ಏರಿಕೆ ಆತಂಕ..!

ಕಾಗದ ಉತ್ಪನ್ನಗಳ ಜಿಎಸ್‌ಟಿ ದರ ಗೊಂದಲ – ನೋಟ್‌ಬುಕ್ ಬೆಲೆ ಏರಿಕೆ ಆತಂಕ..!

0

ಬೆಂಗಳೂರು : ಜಿಎಸ್‌ಟಿ ಪರಿಷ್ಕರಣೆ ಆಯ್ತು. ಈ ಬಾರಿ ಹಲವು ರಿಲ್ಯಾಕ್ಷೇಶನ್‌ ಸಿಕ್ಕಿತ್ತು ಕೂಡ. ಇದರ ಜೊತೆಗೆ ಗೊಂದಲಗಳೂ ಉಂಟಾಗಿದೆ ಎನ್ನುವ ಕೂಗು ಕೇಳಿಬರ್ತಿದೆ. ಆ ಗೊಂದಲದಿಂದಲೇ ವಿದ್ಯಾರ್ಥಿಗಳ ನೋಟ್ ಬುಕ್ ಬೆಲೆ ಹೆಚ್ಚಳವಾಗೋ ಸಾಧ್ಯತೆ ಕಂಡುಬಂದಿದೆ.

ಕಾಗದ ಮತ್ತು ಕಾಗದ ಉತ್ಪನ್ನಗಳ ಮೇಲಿನ ಹೊಸ ಜಿಎಸ್ಟಿ ದರ ಘೋಷಣೆಯಿಂದ ವ್ಯಾಪಾರ ವಲಯದಲ್ಲಿ ಗೊಂದಲ ಉಂಟಾಗಿದೆಯಂತೆ. ವಿದ್ಯಾರ್ಥಿಗಳ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಸರ್ಕಾರದ ಅಭಿಪ್ರಾಯ ಇದ್ದರೂ, ಜಾರಿಗೆ ಬಂದ ನಿಯಮಗಳು ಅದಕ್ಕೆ ವಿರುದ್ಧ ಪರಿಣಾಮ ಬೀರುತ್ತಿವೆ ಎಂದು ಕರ್ನಾಟಕ ಕಾಗದ ಮತ್ತು ಲೇಖನ ಸಾಮಗ್ರಿಗಳ ಸಂಘ ವ್ಯಾಪಾರಿಗಳು ಆರೋಪಿಸಿದ್ದಾರೆ.

ಜಿಎಸ್‌ಟಿ ದರಗಳ ಪ್ರಸ್ತುತ ಸ್ಥಿತಿ –

  • ಕಾಗದ ಮತ್ತು ಕಾಗದದ ಫಲಕಗಳು – 18% ಜಿಎಸ್ಟಿ
  • ಕೆಲವು ಕಾಗದದ ಉತ್ಪನ್ನಗಳು – 18% ಜಿಎಸ್ಟಿ
  • ಪ್ಯಾಕೇಜಿಂಗ್ ಸಾಮಗ್ರಿಗಳು – 5% ಜಿಎಸ್ಟಿ
  • ನೋಟ್‌ಬುಕ್ ಹಾಗೂ ಪಠ್ಯಪುಸ್ತಕಗಳು – 0% (ಶೂನ್ಯದರ)

ನೋಟ್‌ ಬುಕ್‌ ಬೆಲೆ ಏರಿಕೆ ಆತಂಕ – ನೋಟ್‌ಬುಕ್ ತಯಾರಕರು ಕಾಗದವನ್ನು 18% ತೆರಿಗೆ ಪಾವತಿಸಿ ಖರೀದಿಸಬೇಕಾಗಿದೆ. ಆದ್ರೆ ಅಂತಿಮ ಉತ್ಪನ್ನ ನೋಟ್‌ಬುಕ್/ಪಠ್ಯಪುಸ್ತಕಕ್ಕೆ ಶೂನ್ಯ ದರದ ಅಡಿಯಲ್ಲಿ ಬರುತ್ತಿರುವುದರಿಂದ ಇನ್‌ಪುಟ್‌ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್‌ ಮಾಡಲು ಸಾಧ್ಯವಿಲ್ಲ. ಇದರ ಪರಿಣಾಮವಾಗಿ ತಯಾರಕರು ಖರೀದಿಯಲ್ಲಿ ಪಾವತಿಸಿದ ತೆರಿಗೆ ನೇರವಾಗಿ ಅಂತಿಮ ಉತ್ಪನ್ನದ ಬೆಲೆಯಲ್ಲಿ ಸೇರುತ್ತದೆ. ಈ ಸ್ಥಿತಿ ಮುಂದುವರಿದರೆ, ಸೆಪ್ಟೆಂಬರ್ 21ರ ನಂತರದ ಸ್ಟಾಕ್ ಮೇಲೂ ಇನ್ಪುಟ್ ಕ್ರೆಡಿಟ್ ಸಿಗದ ಕಾರಣ, ತಯಾರಕರು ಬೆಲೆ ಹೆಚ್ಚಿಸಲು ಮುಂದಾಗುತ್ತಾರೆ. ಕೊನೆಗೆ ಇದರ ಹೊರೆ ಗ್ರಾಹಕರ ಮೇಲೆ ನೇರವಾಗಿ ಬೀಳುತ್ತದೆ.

ವಿದ್ಯಾರ್ಥಿ ಸಮುದಾಯದ ಹಿತವನ್ನು ಕಾಪಾಡಲು ಕಾಗದ ಮತ್ತು ಕಾಗದ ಉತ್ಪನ್ನಗಳನ್ನು ಒಂದೇ ಜಿಎಸ್‌ಟಿ ದರವಾದ 5% ಅಡಿಯಲ್ಲಿ ತರಬೇಕು. ಇಲ್ಲವಾದರೆ ನೋಟ್‌ಬುಕ್, ಪಠ್ಯಪುಸ್ತಕಗಳ ಬೆಲೆ ಏರಿಕೆಯಾಗುತ್ತದೆ ಮತ್ತು ಶಿಕ್ಷಣ ವಲಯದ ಮೇಲೆ ಹೆಚ್ಚುವರಿ ಬಾಧ್ಯತೆ ಬೀಳುತ್ತದೆ. ಈ ಕುರಿತು ಜಿಎಸ್ಟಿ ಮಂಡಳಿ ತ್ವರಿತವಾಗಿ ಈ ಸಮಸ್ಯೆಯನ್ನು ಬಗೆಹರಿಸಿ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ದೇಶಾದ್ಯಂತ ಕಾಗದ ಉತ್ಪನ್ನಗಳ ತಯಾರಕರಿಗೆ ದೊಡ್ಡ ಹಿನ್ನಡೆ ಉಂಟಾಗುತ್ತದೆ ಅನ್ನೋದು ತಯಾರಕರು, ವ್ಯಾಪಾರಿಗಳ ಒತ್ತಾಯವಾಗಿದೆ.