ಮನೆ ಸುದ್ದಿ ಜಾಲ ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷೆ..!

ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷೆ..!

0

ಲಕ್ನೋ : ಉತ್ತರ ಪ್ರದೇಶ ಸರ್ಕಾರ ಬೀದಿ ನಾಯಿಗಳ ದಾಳಿಯನ್ನು ತಡೆಯಲು ದಿಟ್ಟ ಕ್ರಮಕೈಗೊಂಡಿದೆ. ಪ್ರಚೋದನೆ ಇಲ್ಲದೆ ಮನುಷ್ಯರನ್ನು ಮೊದಲ ಸಲ ಕಚ್ಚಿದ್ರೆ ಅದನ್ನು 10 ದಿನಗಳವರೆಗೆ ಪ್ರಾಣಿ ಕೇಂದ್ರದಲ್ಲಿ ಇರಿಸಲಾಗುತ್ತದೆ. ಮತ್ತೆ ಅದೇ ತಪ್ಪನ್ನು ಅದು ಮುಂದುವರಿಸಿದರೆ ಅದಕ್ಕೆ ಜೀವಾವಧಿ ಶಿಕ್ಷೆ ವಿಧಿಸಲು ಸರ್ಕಾರ ನಿರ್ಧರಿಸಿದೆ.

ಶಿಕ್ಷೆಗೆ ಗುರಿಯಾದ ನಾಯಿಗಳಿಗೆ ಬಚಾವ್‌ ಆಗಲು ಇರುವ ಏಕೈಕ ಮಾರ್ಗವೆಂದರೆ ಯಾರಾದರೂ ಅವುಗಳನ್ನು ದತ್ತು ತೆಗೆದುಕೊಳ್ಳಬೇಕು. ದತ್ತು ತೆಗೆದುಕೊಳ್ಳಬೇಕಾದರೆ ಮತ್ತೆ ಅವುಗಳನ್ನು ಬೀದಿಗಳಲ್ಲಿ ಬಿಡುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಬೇಕು. ಈ ಬಗ್ಗೆ ಗ್ರಾಮೀಣ ಮತ್ತು ನಗರ ನಾಗರಿಕ ಸಂಸ್ಥೆಗಳಿಗೆ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜತ್ ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಬೀದಿ ನಾಯಿ ಕಚ್ಚಿದ ನಂತರ ಯಾರಾದರೂ ರೇಬೀಸ್‌ ತಡೆಗೆ ಲಸಿಕೆಯನ್ನು ತೆಗೆದುಕೊಂಡರೆ, ತನಿಖೆ ಮಾಡಲಾಗುತ್ತದೆ. ಬಳಿಕ ನಾಯಿಯನ್ನು ಪತ್ತೆ ಮಾಡಿ ಹತ್ತಿರದ ಪ್ರಾಣಿ ಜನನ ನಿಯಂತ್ರಣ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. ಅದರ ಮೇಲೆ 10 ದಿನಗಳವರೆಗೆ ನಿಗಾ ಇಡಲಾಗುತ್ತದೆ. ಅದರ ನಡವಳಿಕೆಯನ್ನು ಗಮನಿಸಿ, ಮೈಕ್ರೋಚಿಪ್ ಅಳವಡಿಸಿ ಬಿಡುಗಡೆ ಮಾಡಲಾಗುತ್ತದೆ. ಈ ಮೈಕ್ರೋಚಿಪ್‌ ನಾಯಿಯ ಎಲ್ಲಾ ವಿವರಗಳನ್ನು ಹೊಂದಿರುತ್ತದೆ. ಇದರಿಂದಾಗಿ ಸ್ಥಳವನ್ನು ಪತ್ತೆಹಚ್ಚಲು ಅನುಕೂಲವಾಗುತ್ತದೆ ಎಂದು ಪ್ರಯಾಗ್‌ರಾಜ್ ಪುರಸಭೆಯ ಪಶುವೈದ್ಯ ಅಧಿಕಾರಿ ಡಾ. ಬಿಜಯ್ ಅಮೃತ್ ರಾಜ್ ತಿಳಿಸಿದ್ದಾರೆ.

ಅದೇ ನಾಯಿ ಎರಡನೇ ಬಾರಿಗೆ ಪ್ರಚೋದನೆಗೆ ಒಳಗಾಗದೆ ಮನುಷ್ಯನನ್ನು ಕಚ್ಚಿದರೆ, ಅದನ್ನು ಜೀವಿತಾವಧಿಯವರೆಗೆ ಕೇಂದ್ರದಲ್ಲಿ ಇಡಲಾಗುತ್ತದೆ. ನಾಯಿ ಪ್ರಚೋದನೆಯಿಂದ ಕಚ್ಚಿದೆಯೇ ಇಲ್ಲವೇ ಎಂಬುದ್ದನ್ನು ಅರಿಯಲು ಆ ಪ್ರದೇಶದ ಪಶುವೈದ್ಯರು, ಪ್ರಾಣಿಗಳ ಬಗ್ಗೆ ಅನುಭವ ಹೊಂದಿರುವ ಮತ್ತು ಅವುಗಳ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವ ಮೂರು ಜನರ ಸಮಿತಿಯನ್ನು ರಚಿಸಲಾಗುತ್ತದೆ. ದಾಳಿಯು ಅಪ್ರಚೋದಿತವಾಗಿದೆಯೇ ಎಂದು ಅವರು ಪರಿಶೀಲಿಸುತ್ತಾರೆ. ಯಾರಾದರೂ ಕಲ್ಲು ಎಸೆದ ನಂತರ ಪ್ರಾಣಿ ಕಚ್ಚಿದರೆ, ಅದನ್ನು ಅಪ್ರಚೋದಿತ ದಾಳಿ ಎಂದು ಪರಿಗಣಿಸಲಾಗುವುದಿಲ್ಲ ಎಂದಿದ್ದಾರೆ.

ಶಿಕ್ಷೆಗೆ ಗುರಿಯಾದ ನಾಯಿಗಳನ್ನು ದತ್ತು ಪಡೆಯಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ. ದತ್ತು ಪಡೆಯುವ ವ್ಯಕ್ತಿಯ ಹೆಸರು, ವಿಳಾಸ ಇತ್ಯಾದಿಗಳ ಎಲ್ಲಾ ವಿವರಗಳನ್ನು ಒದಗಿಸಬೇಕು. ನಾಯಿಯನ್ನು ಬೀದಿಗಳಲ್ಲಿ ಬಿಡುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಬೇಕು. ಅದನ್ನು ದತ್ತು ಪಡೆದ ವ್ಯಕ್ತಿಗೆ ಒಪ್ಪಿಸಬೇಕಾದರೆ ನಾಯಿಯ ಮೈಕ್ರೋಚಿಪ್ ವಿವರಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಅದನ್ನು ಬಿಡುಗಡೆ ಮಾಡಿದರೆ, ದತ್ತು ಪಡೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.