ಮನೆ ರಾಜ್ಯ ಐದು ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಉಪಚುನಾವಣೆ: ಶಾಂತಿಯುತ ಮತದಾನ

ಐದು ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಉಪಚುನಾವಣೆ: ಶಾಂತಿಯುತ ಮತದಾನ

0

ನವದೆಹಲಿ(New Delhi): ಐದು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಲೋಕಸಭೆಯ ಮೂರು ಹಾಗೂ ವಿಧಾನಸಭೆಯ ಏಳು ಸ್ಥಾನಗಳಿಗೆ ಗುರುವಾರ ಉಪಚುನಾವಣೆ ನಡೆಯುತ್ತಿದ್ದು, ಮೊದಲೆರಡು ಗಂಟೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ.

ದೆಹಲಿ, ಉತ್ತರ ಪ್ರದೇಶ, ಪಂಜಾಬ್, ತ್ರಿಪುರಾ, ಆಂಧ್ರಪ್ರದೇಶ ಹಾಗೂ ಜಾರ್ಖಂಡ್ ಉಪಚುನಾವಣೆಯ ಮತ ಎಣಿಕೆ ಭಾನುವಾರ ನಡೆಯಲಿದೆ.

ಪಂಜಾಬ್‌ನ ಸಂಗ್ರೂರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಶಕ್ತಿ ಪ್ರದರ್ಶನದ ಸವಾಲನ್ನು ಎದುರಿಸುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಬಾರಿಸಿರುವ ಎಎಪಿ ಪಂಜಾಬ್‌ನಲ್ಲಿ ಇದೇ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಿತ್ತು. ಆದರೆ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣವು ಹಿನ್ನಡೆಗೆ ಕಾರಣವಾಗಿದೆ.

ಉತ್ತರ ಪ್ರದೇಶದಲ್ಲಿ ವಿರೋಧಪಕ್ಷ ಸಮಾಜವಾದಿ ಪಕ್ಷದ (ಎಸ್‌ಪಿ) ಭದ್ರಕೋಟೆ ಎಂದು ಪರಿಗಣಿಸಲಾದ ಲೋಕಸಭೆ ಕ್ಷೇತ್ರಗಳಾದ ಅಜಂಗಢ ಹಾಗೂ ರಾಂಪುರದಲ್ಲಿ ಉಪಚುನಾವಣೆ ನಡೆಯುತ್ತಿದೆ.

ಈ ಕ್ಷೇತ್ರಗಳಲ್ಲಿ ಮೊದಲೆರಡು ತಾಸಿನಲ್ಲಿ ಸರಾಸರಿ ಶೇ 8ರಷ್ಟು ಮತದಾನವಾಗಿದೆ.ವರ್ಷಾರಂಭದಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಶಾಸಕರಾಗಿ ಆಯ್ಕೆಯಾದ ಬಳಿಕ ಅವರಿಂದ ತೆರವಾಗಿರುವ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ.

ತ್ರಿಪುರಾದಲ್ಲಿ ವಿಧಾನಸಭೆ ಕ್ಷೇತ್ರಗಳಾದ ಅಗರ್ತಲಾ, ಟೌನ್ ಬರ್ದೊವಾಲಿ, ಸುರ್ಮ ಹಾಗೂ ಜುಬರಾಜನಗರದಲ್ಲಿ ಉಪಚುನಾವಣೆ ಪ್ರಗತಿಯಲ್ಲಿದೆ.ಆಂಧ್ರಪ್ರದೇಶದ ಆತ್ಮಕೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಮೊದಲ ಎರಡು ತಾಸುಗಳಲ್ಲಿ ಶೇ 12ರಷ್ಟು ಮತದಾನವಾಗಿದೆ.

ದೆಹಲಿಯಲ್ಲಿ ರಾಜಿಂದರ್ ನಗರ ಮತ್ತು ಜಾರ್ಖಂಡ್‌ನಲ್ಲಿ ಬಿಗಿ ಭದ್ರತೆಯಲ್ಲಿ ಮಂದರ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಆರಂಭವಾಗಿದೆ.