ಬೆಂಗಳೂರು : ಕ್ರಿಶ್ಚಿಯನ್ ಕುರುಬ ಅಂತ ನಾವು ಬರೆಸಿಲ್ಲ, ಜನರೇ ಬರೆಸಿದ್ದಾರೆ. ಅದಕ್ಕೆ ನಾವು ಏನು ಮಾಡಲು ಆಗುತ್ತೆ? ಯಾಕೆ ಬರೆಸಿದ್ದೀರೀ ಎಂದು ಪ್ರಶ್ನೆ ಮಾಡಲು ನಾವು ಬಿಜೆಪಿಯವರಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ರಿಶ್ಚಿಯನ್ ಜೊತೆ ಸೇರಿದ ಜಾತಿಗಳ ಬಗ್ಗೆ ಚರ್ಚೆಯಾಗಿದೆ. ನಾವು ಆಯೋಗಕ್ಕೆ ಕೆಲವು ಸೂಚನೆ ಕೊಡಬಹುದು. ಆದರೆ ಆಯೋಗದ ಮೇಲೆ ಒತ್ತಡ ಹೇರುವುದಕ್ಕೆ ಆಗುವುದಿಲ್ಲ. ಸಿಎಂ ಕೂಡ ಹೀಗೆ ಮಾಡಿ ಎಂದು ಆಯೋಗದ ಮೇಲೆ ಒತ್ತಡಹಾಕಲು ಆಗಲ್ಲ. ಕೆಲವು ಸಾಧಕಬಾಧಕ ಬಗ್ಗೆ ಚರ್ಚೆಯಾಗಿದೆ, ಸಲಹೆ ನೀಡಲಾಗಿದೆ.
ಜಾತಿ, ಜಾತಿ ಎಂದು ಯಾಕೆ ಹೇಳುತ್ತೀರಿ? ಜನರು ಹೇಳಿದ ಜಾತಿಯನ್ನು ಪಟ್ಟಿ ಮಾಡಲಾಗಿದೆ. ನಾನೋ, ಸಿಎಂ ಅಥವಾ ಡಿಕೆಶಿಯವರೋ ಪಟ್ಟಿ ಮಾಡಿ ಕೊಟ್ಟಿಲ್ಲ. ಆಯೋಗ ಪಟ್ಟಿ ಮಾಡಿಲ್ಲ, ಜನರು ಬರೆದಿದ್ದನ್ನು ಆಯೋಗ ಪಟ್ಟಿಯಲ್ಲಿ ಸೇರಿಸಿದೆ. ಜನರಲ್ಲಿ ಭಾವನೆ ಏನಿದೆಯೋ ಅದನ್ನು ಬರೆಯಲಿ ಎಂದರು.
ಬಿಜೆಪಿಯವರಿಗೆ ಏನೋಗಿದೆಯೋ ಗೊತ್ತಿಲ್ಲ. ಬಿಜೆಪಿಯವರಿಗೆ ಜಾತಿ, ಮಸೀದಿ ಕಂಡರೆ ಪ್ರೀತಿ, ಮುಸ್ಲಿಂ ಕಂಡರೆ ಇನ್ನೂ ಜಾಸ್ತಿ ಪ್ರೀತಿ. ಅಭಿವೃದ್ಧಿ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ. ಜಾತಿ ವಿಚಾರದಲ್ಲಿನಾವು ಹೇಳಿದ್ದು ಫೈನಲ್ ಅಲ್ಲ. ಆಯೋಗ ಮೊದಲು ವರದಿ ಕೊಡಲಿ.
ಸರ್ಕಾರ ಸಂಪುಟದಲ್ಲಿ ತೀರ್ಮಾನ ಮಾಡುತ್ತದೆ. ಜನರು ಏನು ಬೇಕಾದರೂ ಬರೆಸಲಿ. ಎಲ್ಲಾ ಸಮಾಜದವರು ಸಭೆ ಮಾಡುತ್ತಿದ್ದಾರೆ. ಎಲ್ಲರೂ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಫೈನಲ್ ಆಗಿ ಜನರು ಏನು ಬರೆಸಬೇಕು ಎಂಬುದನ್ನು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಆಯೋಗ ಸ್ವತಂತ್ರ ಸಂಸ್ಥೆ, ಅದರ ಮೇಲೆ ಒತ್ತಡ ಹೇರಲು ಆಗಲ್ಲ. ಯಾರೂ ಮಧ್ಯಪ್ರವೇಶ ಮಾಡಬಾರದು ಎಂದು ಸಿಎಂ ಹೇಳಿದ್ದಾರೆ. ಬಿಜೆಪಿಯವರಿಗೆ ಕೆಲಸ ಏನಿದೆ? ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ. ಗ್ಯಾರಂಟಿ ಬಡಜನರಿಗೆ ತಲುಪುತ್ತಿಲ್ಲ ಅಂದರೆ ಹೇಳಲಿ. ಮೋದಿ ಮುಂದೆ ಮಾತನಾಡುವ ತಾಕತ್ತು ಇವರಿಗೆ ಇಲ್ಲ.
ಇಲ್ಲಿ ಮಸೀದಿ, ಧರ್ಮದ ಬಗ್ಗೆ ಮಾತನಾಡುತ್ತಾರೆ. ಜಾತಿಗಳ ಬಗ್ಗೆ ನಾವು ಚರ್ಚೆ ಮಾಡಬಾರದು. ಜಾತಿ ಬಗ್ಗೆ ಚರ್ಚೆ ಮಾಡಿದರೆ ದೇಶ ಅವನತಿಯತ್ತ ಸಾಗುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಳಾಗಿರುವುದೇ ಧರ್ಮದ ಚರ್ಚೆ ಮಾಡಿ ಎಂದು ಕಿಡಿಕಾರಿದರು.
ನಮ್ಮ ಸರ್ಕಾರ ಮಾಡುತ್ತಿರುವುದು ಜಾತಿಗಣತಿ ಅಲ್ಲ. ಶೈಕಣಿಕ, ಆರ್ಥಿಕ ಸಮೀಕ್ಷೆಯನ್ನು ನಾವು ಮಾಡುತ್ತಿದ್ದೇವೆ. ನಮಗೆ ಜಾತಿಗಣತಿ ಮಾಡುವ ಪವರ್ ಇಲ್ಲ. ಕೇಂದ್ರ ಸರ್ಕಾರಕ್ಕೆ ಜಾತಿಗಣತಿ ಮಾಡುವ ಪವರ್ ಇದೆ. ನಾವು ಸ್ಪಷ್ಟವಾಗಿ ಆದೇಶ ಹೊರಡಿಸಿದ್ದೇವೆ.
ಸೆ.22ರಿಂದ ಅಕ್ಟೋಬರ್ 7ರವರೆಗೆ ಸಮೀಕ್ಷೆ ನಡೆಯಲಿದೆ. ಮನೆಮನೆಗೆ ಹೋಗಿ ಸಮೀಕ್ಷೆ ಮಾಡುತ್ತಾರೆ. ದಯಮಾಡಿ ಬಂದವರಿಗೆ ಎಲ್ಲಾ ಮಾಹಿತಿ ನೀಡಿ. 60 ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರವನ್ನು ನೀಡಿ. ಯಾರ ಒತ್ತಡಕ್ಕೂ ಒಳಗಾಗದೆ ಉತ್ತರವನ್ನು ನೀಡಿ ಎಂದು ಹೇಳಿದರು.















