ಬೆಂಗಳೂರು : ವಾಣಿವಿಲಾಸ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಸಿನ್ ಸಿಗದೇ ರೋಗಿಗಳು ಪರದಾಡ್ತಿದ್ದಾರೆ. ಯಾಕೆ ಶಾರ್ಟೆಜ್ ಅಂತ ಪ್ರಶ್ನಿಸಿದರೆ, ರೋಗಿಗಳಿಗೆ ಸಿಬ್ಬಂದಿ ಗದರಿಸ್ತಿದ್ದಾರೆ, ಸಿಎಂ ಅವರನ್ನೇ ಕೇಳಿ ಅಂತ ಉಡಾಫೆ ಉತ್ತರ ಕೊಡ್ತಿದ್ದಾರೆ. ಈ ಕರ್ಮಕಾಂಡ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಮೆಡಿಸಿನ್ ಶಾರ್ಟೆಜ್ ಇದೆ. ಅಗತ್ಯ ಔಷಧಿಗಳು ಸಿಗದೇ ರೋಗಿಗಳು ಪರದಾಡ್ತಿದ್ದಾರೆ. ಅನಿವಾರ್ಯವಾಗಿ ಖಾಸಗಿ ಮೆಡಿಕಲ್ಗಳಲ್ಲಿ ಕಾಸು ಕೊಟ್ಟು ಔಷಧ ಖರೀದಿ ಮಾಡ್ತಿದ್ದಾರೆ. ಆದ್ರೆ ಔಷಧ ಕೊಡಿ ಅಂತ ರೋಗಿಗಳು ಕೇಳಿದ್ರೆ ಖಾಲಿಯಾಗಿದೆ, ಸಿಎಂ ರನ್ನೇ ಕೇಳಿ ಅಂತ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದಾರೆ.
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಔಷಧಿಗಳ ಪೂರೈಕೆಯಲ್ಲಿ ವ್ಯತ್ಯಯ ಆಗ್ತಿದೆ. ಇದರಿಂದ ವಾಣಿವಿಲಾಸ ಆಸ್ಪತ್ರೆಗೆ ಅಗತ್ಯ ಔಷಧಿಗಳು ಪೂರೈಕೆ ಆಗ್ತಿಲ್ಲ. ಕೆಲ ಮಾತ್ರೆಗಳು ಮಾತ್ರ ಸ್ಟಾಕ್ ಇದೆ ಎನ್ನಲಾಗ್ತಿದೆ. ಇನ್ನೂ ಈ ವಿಚಾರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಮಾತನಾಡಿ, ಸಮಸ್ಯೆ ಆಗಿದ್ರೆ ಮಾಹಿತಿ ಪಡೆದು ಸರಿಪಡಿಸುವ ಕೆಲಸ ಮಾಡಲಾಗುತ್ತೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಉಚಿತವಾಗಿ ಸಿಗುತ್ತೆ ಅಂತ ಆಸ್ಪತ್ರೆ ಆವರಣದಲ್ಲಿದ್ದ ಜನೌಷಧಿ ಕೇಂದ್ರಗಳನ್ನ ಮುಚ್ಚಿಸಿದ್ರು. ಈಗ ಆಸ್ಪತ್ರೆಯಲ್ಲಿ ಔಷಧಿಗಳೇ ಸಿಗ್ತಿಲ್ಲ. ಔಷಧಿ ಖರೀದಿಗೆ ಕರೆಯಲಾಗಿರುವ ಟೆಂಡರ್ ಕೂಡ ಅಂತಿಮ ಆಗಿಲ್ಲ. ಹೀಗಾಗಿ ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಎದುರಿಸುವಂತಾಗಿದೆ.















