ಮನೆ ರಾಜ್ಯ ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ಮಾರಾಟದ ಲೆಕ್ಕ ಇಡಬೇಕು – ಹೈಕೋರ್ಟ್ ಸೂಚನೆ..!

ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ಮಾರಾಟದ ಲೆಕ್ಕ ಇಡಬೇಕು – ಹೈಕೋರ್ಟ್ ಸೂಚನೆ..!

0

ಬೆಂಗಳೂರು : ಎಲ್ಲಾ ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ಮಾರಾಟದ ಲೆಕ್ಕ ಇಡಬೇಕು. ಒಂದೊಮ್ಮೆ ಸರ್ಕಾರದ ಆದೇಶ ಎತ್ತಿಹಿಡಿದರೆ ಆ ಹಣವನ್ನು ಟಿಕೆಟ್ ಖರೀದಿದಾರರಿಗೆ ಮರಳಿಸಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.

ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳ ಟಿಕೆಟ್ ದರಕ್ಕೆ ಗರಿಷ್ಠ 200 ರೂ. ಮಿತಿ ಹೇರಿ ರಾಜ್ಯ ಗೃಹ ಇಲಾಖೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು. ಆದೇಶಕ್ಕೆ ಏಕಸದಸ್ಯ ಪೀಠ ತಡೆ ನೀಡಿತ್ತು. ಈ ಆದೇಶ ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಹೊಂಬಾಳೆ ಸಿನಿಮಾಸ್ ಪರ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿದರು. ಅರ್ಜಿದಾರರ ಪರ ವಕೀಲ ಲಕ್ಷ್ಮಿ ನಾರಾಯಣ್ ವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಎಲ್ಲಾ ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ಮಾರಾಟ ಮಾಡಿ ಸಂಗ್ರಹಿಸುವ ಹಣದ ಲೆಕ್ಕವನ್ನು ನಿರ್ವಹಿಸಬೇಕು. ಒಂದೊಮ್ಮೆ ನಿಯಮವನ್ನು ಪೀಠ ಎತ್ತಿಹಿಡಿದರೆ ಆ ಹಣವನ್ನು ಟಿಕೆಟ್ ಖರೀದಿದಾರರಿಗೆ ಮರಳಿಸಬೇಕು ಎಂದು ಆದೇಶಿಸಿದೆ.

ನಿಯಮಿತವಾಗಿ ಟಿಕೆಟ್ ಮಾರಾಟ ಮಾಡಿದ ಹಣದ ದಾಖಲೆಯನ್ನು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾವು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇದನ್ನು ಮಾಡದ ಮಲ್ಟಿಪ್ಲೆಕ್ಸ್‌ಗಳಿಗೆ ನ್ಯಾಯಾಲಯದ ಮಧ್ಯಂತರ ಆದೇಶವು ಅನ್ವಯಿಸುವುದಿಲ್ಲ ಎಂದು ಕೋರ್ಟ್ ತಿಳಿಸಿ, ವಿಚಾರಣೆಯನ್ನು ಮುಂದೂಡಿದೆ.

ನಗದಿನಲ್ಲಿ ಖರೀದಿಸಿದ ಟಿಕೆಟ್ ಹಣವನ್ನು ನಿರ್ದಿಷ್ಟ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆ ಮಾಡಬಹುದು. ಇದನ್ನು ಸರ್ಕಾರವು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಮಲ್ಟಿಪ್ಲೆಕ್ಸ್‌ಗಳು ಸಿನಿಮಾ ಆರಂಭವಾಗುವುದಕ್ಕೂ ಮುನ್ನ ಜನರಿಗೆ ತಿಳಿಸಬೇಕು ಎಂದು ಕೋರ್ಟ್ ಸೂಚಿಸಿದೆ.