ಮೈಸೂರು : ಸಿಎಂ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ್ದಾರೆ. ಮಧ್ಯಾಹ್ನ1 ರಿಂದ 18ರ ಶುಭ ಧನುರ್ ಲಗ್ನದಲ್ಲಿ ಪೂಜೆ ನೆರವೇರಿಸಿದರು.
ಕೋಟೆ ಆಂಜನೇಯ ಸ್ವಾಮಿ ಮುಂಭಾಗದಲ್ಲಿ ನಂದಿಧ್ವಜಕ್ಕೆ ಪೂಜೆ ನೆರವೇರಿಸಲಾಯಿತು. ಈ ವೇಳೆ ಸಿಎಂ ಈಡುಗಾಯಿ ಒಡೆದರು. ಎರಡು ಸಲ ವಿಫಲವಾಗಿ, 3ನೇ ಬಾರಿಗೆ ಈಡುಗಾಯಿ ಒಡೆಯುವಲ್ಲಿ ಅವರು ಯಶಸ್ವಿಯಾದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಿಶ್ವವಿಖ್ಯಾತ ಜಂಬೂ ಸವಾರಿ ಇಂದು ನಡೆಯಲಿದೆ. ಈಗಾಗಲೇ ನಂದಿ ಧ್ವಜ ಪೂಜೆ ನೆರವೇರಿದೆ. ಎಲ್ಲಾ ಪ್ರವಾಸಿಗರಿಗೆ ಸ್ವಾಗತ ಕೋರುತ್ತೇನೆ.
ಹಿಂದೆ ಸಿಎಂ ಆಗಿದ್ದಾಗಲೂ ನಾನು ದಸರಾದಲ್ಲಿ ಭಾಗಿಯಾಗಿದ್ದೇನೆ. 8 ಸಲ ಸಿಎಂ ಆಗಿ ದಸರಾಕ್ಕೆ ಬಂದಿದ್ದೇನೆ. ಜನರ ಆಶೀರ್ವಾದದಿಂದ ಇದು ಸಾಧ್ಯವಾಗಿದ್ದು, ರಾಜ್ಯದ ಜನ ಎಲ್ಲರೂ ಖುಷಿಯಾದರೆ ಸರ್ಕಾರ ಸಹ ಸಂತೋಷವಾಗಿರುತ್ತದೆ ಎಂದಿದ್ದಾರೆ.
ಇದಕ್ಕೂ ಮುನ್ನ ಅರಮನೆ ಬಲರಾಮ ದ್ವಾರದ ಕೋಡಿ ಸೋಮೇಶ್ವರ ದೇವಾಲಯದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಯಿತು. ಸಿದ್ದರಾಮಯ್ಯ ಅವರು ಪೂಜೆ ಸಲ್ಲಿಸುವ ವೇಳೆ ಸಚಿವ ಮಹಾದೇವಪ್ಪ, ಭೈರತಿ ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.















