ಬೆಂಗಳೂರು : ಕಾಂತಾರ ಚಾಪ್ಟರ್ 1 ಸಿನಿಮಾ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಆದರೆ ಸಿನಿಮಾ ವೀಕ್ಷಿಸುವಾಗ ವೇಳೆ ಕೆಲ ಅಭಿಮಾನಿಗಳ ಅತಿರೇಕದ ವರ್ತನೆ ತುಳುವರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಬೆಂಗಳೂರು ತುಳುಕೂಟ ನಟ ರಿಷಬ್ ಶೆಟ್ಟಿಗೆ ಪತ್ರವೊಂದು ಕಳುಹಿಸಿದೆ.
ಕಾಂತಾರ ಚಾಪ್ಟರ್ 1 ಸಿನಿಮಾ ಇಡೀ ಭಾರತೀಯ ಚಿತ್ರರಂಗ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದ ಕರಾವಳಿಯ ದೈವರಾಧನೆಯ ಚಿತ್ರ. ಮೊದಲ ಭಾಗದ ಯಶಸ್ಸಿನ ಬಳಿಕ ಬಿಡುಗಡೆಯಾಗಿರುವ ಈ ಸಿನಿಮಾ ಕೂಡ ಭಾರಿ ಸದ್ದು ಮಾಡುತ್ತಿದ್ದು, ಮತ್ತದೇ ರೀತಿಯ ಯಶಸ್ಸಿನ ಕಡೆ ಮುನ್ನುಗ್ಗುತ್ತಿದೆ.
ಆದರೆ ಚಿತ್ರ ವೀಕ್ಷಣೆ ವೇಳೆ ಕೆಲವರ ಅತಿರೇಕದ ವರ್ತನೆ, ದೈವದ ಮೇಲೆ ನಂಬಿಕೆ ಇಟ್ಟವರ ಭಾವನೆಗೆ ಧಕ್ಕೆಯಾಗುತ್ತಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಬೆಂಗಳೂರು ತುಳುಕೂಟ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಪತ್ರದ ಮೂಲಕ ಮನವಿ ಮಾಡಿ, ಹುಚ್ಚಾಟ ಮಾಡುವವರಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ.
ದೇಶದಾದ್ಯಂತ ಬಿಡುಗಡೆಯಾಗಿರುವ ಕಾಂತಾರ ಚಾಪ್ಟರ್ 1 ಚಿತ್ರ ವೀಕ್ಷಣೆ ವೇಳೆ ಅಲ್ಲಲ್ಲಿ ಕೆಲವರು ಹುಚ್ಚಾಟ ಮಾಡುತ್ತಿರುವುದು ತುಳುವರನ್ನು ಕೆರಳಿಸಿದೆ. ನಿರ್ದಿಷ್ಟ ಪ್ರದೇಶದಲ್ಲಿ ನಂಬಿಕೆಯಿಂದ ಗೌರವಿಸುವ ಆಚರಣೆಯನ್ನ ಎಲ್ಲೆಂದರಲ್ಲಿ ವೇಷ ಧರಿಸಿ ಕೆಲವರು ಅತಿರೇಕದ ವರ್ತನೆ ತೋರುತ್ತಿರೋದು ಆಕ್ರೋಶಕ್ಕೆ ಕಾರಣವಾಗ್ತಿದೆ.
ಥಿಯೇಟರ್‌ಗಳಲ್ಲಿ ದೈವದ ವೇಷ ಧರಿಸಿ ಓಡಾಟ, ಚಿತ್ರದಲ್ಲಿ ತೋರಿಸುವ ದೈವದ ವರ್ತನೆಗಳಂತೆ ಚಿತ್ರಮಂದಿರಗಳಲ್ಲಿ ಕಿರುಚಾಡುವುದು ತುಳುವರ ನಂಬಿಕೆಗೆ ಧಕ್ಕೆಯಾಗುತ್ತಿದೆ. ಹೀಗಾಗಿ ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ ಹಾಗೂ ಈ ರೀತಿ ವರ್ತನೆ ತೋರದಂತೆ ಜನರಿಗೆ ಕೂಡಲೇ ತಿಳಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಇನ್ನೂ ಈ ಹಿಂದೆ ಕಾಂತಾರ ಮೊದಲ ಭಾಗ ಬಿಡುಗಡೆಯಾದಾಗಲೂ ಇದೇ ರೀತಿಯ ವರ್ತನೆಗಳು ಕಂಡು ಬಂದಿದ್ದವು, ಆಗಲೂ ತುಳುಕೂಟ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿ, ಎಲ್ಲೆಂದರಲ್ಲಿ ದೈವದ ವೇಷ ಧರಿಸಿ, ಅದರ ಅನುಕರಣೆ ಮಾಡುತ್ತಿದ್ದವರ ವಿರುದ್ಧ ಕ್ರಮಕ್ಕೆ ಮನವಿ ಮಾಡಿತ್ತು. ಬಳಿಕ ಎಲ್ಲ ಕಡಿಮೆ ಆಗಿತ್ತು.
ಆದರೆ ಈಗ ಮತ್ತೆ ಚಾಪ್ಟರ್ 1 ಬಿಡುಗಡೆಯಾದ ಮೇಲೆಯೂ ಅಂತಹದ್ದೇ ವರ್ತನೆಗಳು ಪುನಾರರ್ವತಿಯಾಗುತ್ತಿದೆ. ಈ ಬಗ್ಗೆ ಕಾನೂನು ಸಮರಕ್ಕೆ ಮುಂದಾಗಲು ನಿರ್ಧಾರ ಮಾಡಿರುವ ತುಳುಕೂಟ, ಯಾರು ದೈವದ ಆಚರಣೆ ವಿಚಾರವಾಗಿ ಈ ರೀತಿ ವೇಷಧರಿಸಿ ಎಲ್ಲೆಂದರಲ್ಲಿ ಹುಚ್ಚಾಟ ಮಾಡುತ್ತಾರೆ ಅಂತವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದೆ.














