ಬೆಂಗಳೂರು : ಕಾಲ್‌ಸೆಂಟರ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ ಜನರಿಗೆ ವಂಚಿಸುತ್ತಿದ್ದ ಅಡ್ಡೆ ಮೇಲೆ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರು ದಾಳಿ ನಡೆಸಿ, 16 ಜನರ ಗ್ಯಾಂಗ್‌ವೊಂದನ್ನು ಬಂಧಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಡಿ, ಸಿಸಿಬಿ, ಸಿಬಿಐ, ಜಡ್ಜ್‌ಗಳ ಹೆಸರಲ್ಲಿ ವಿವಿಧ ಕಾರಣಗಳನ್ನು ನೀಡಿ ಜನರಿಗೆ ಬೆದರಿಸಿ ಕೋಟ್ಯಂತರ ರೂಪಾಯಿ ವಂಚಿಸಿ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದರು.
ಆದರೆ ಇದೀಗ ಗ್ಯಾಂಗ್‌ವೊಂದು ಬೆಂಗಳೂರಿನಲ್ಲಿ ಕಾಲ್‌ಸೆಂಟರ್ ರೀತಿಯಲ್ಲಿ ಎರಡು ಫ್ಲೋರ್‌ನಲ್ಲಿ ವ್ಯವಸ್ಥಿತವಾಗಿ ಕೆಲಸಗಾರರನ್ನು ಸಂಬಳ ಕೊಟ್ಟು ಡಿಜಿಟಲ್ ಅರೆಸ್ಟ್ ಮಾಡಿ, ಜನರ ಬಳಿ ಸುಲಿಗೆ ಮಾಡಿರೋದು ಬೆಳಕಿಗೆ ಬಂದಿದೆ.
ಬಂಧಿತರನ್ನು ವಿಚಾರಣೆ ಮಾಡಿದಾಗ ಮೋಸಹೋದವರು ಬಹುತೇಕ ದೆಹಲಿ ಸೇರಿದಂತೆ ಹೊರರಾಜ್ಯದವರು ಎಂದು ತಿಳಿದುಬಂದಿದೆ. ಹೀಗಾಗಿ ಪೊಲೀಸರು ಮೋಸ ಹೋದವರನ್ನ ಸಂಪರ್ಕಿಸಿ, ಅವರಿಂದ ದೂರು ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.
ದುಪ್ಪಟ್ಟು ಹಣದಾಸೆಗಾಗಿ ಯಾವುದೇ ಕಾರಾರು ಬರೆಸಿಕೊಳ್ಳದೆ ಮಾಲೀಕ ಎರಡು ಫ್ಲೋರ್‌ಗಳನ್ನು ಬಾಡಿಗೆ ಕೊಟ್ಟಿರುವುದು ಕಂಡುಬಂದಿದೆ. ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಅರೆಸ್ಟ್ ಮಾಡುತ್ತಿದ್ದಂತೆ ವಿಷಯ ತಿಳಿದು ಮಾಲೀಕರು ತಲೆಮರಿಸಿಕೊಂಡಿದ್ದಾರೆ.
ಸದ್ಯಕ್ಕೆ ಮಾಲೀಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇತ್ತ ಪೂರ್ವ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದ ವಿಶೇಷ ತಂಡ ಮುಂಬೈಯಲ್ಲಿ ವಂಚಕರಿಗಾಗಿ ಹುಡಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.














